ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹ
ಆಡಳಿತ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದ ಶಿಕ್ಷಕರುಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕಿನಲ್ಲಿ ಆರಂಭಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಎರಡನೇ ದಿನವೂ ತೊಡಕುಗಳು ಎದುರಾಗಿವೆ. ಸಮೀಕ್ಷಾ ಕಾರ್ಯಕ್ಕೆ ತೆರಳಿದ ಗಣತಿದಾರರು ಸರ್ವರ್ ಸಮಸ್ಯೆ, ಆ್ಯಪ್ ಸಮಸ್ಯೆ ಹಾಗೂ ನಿಗದಿಪಡಿಸಿದ ವ್ಯಾಪ್ತಿ ಬಿಟ್ಟು ಹತ್ತು ಇಪ್ಪತ್ತು ಕಿಮೀ ದೂರದಲ್ಲಿರುವ ಮನೆಗಳನ್ನು ತೋರಿಸುತ್ತಿರುವ ಗೂಗಲ್ ಮ್ಯಾಪನ್ನು ಹಿಂಬಾಲಿಸಿಕೊಂಡು ಸುಸ್ತಾದ ಗಣತಿದಾರರು ಸರ್ಕಾರ ತಾಂತ್ರಿಕ ಸಮಸ್ಯೆ ಬಗೆಹರಿಸುವರೆಗೆ ಸದ್ಯಕ್ಕೆ ತಾತ್ಕಾಲಿಕವಾಗಿ ಗಣತಿ ಕಾರ್ಯಕ್ಕೆ ವಿರಾಮ ಹೇಳಿದ್ದಾರೆ.ಪರಿಣಾಮ ಮಂಗಳವಾರದಿಂದ ಹಳಿಯಾಳ ತಾಲೂಕಿನ ಮಟ್ಟಿಗೆ ಗಣತಿ ಕಾರ್ಯ ಸ್ಥಗಿತಗೊಂಡಿದೆ.ತಮಗೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು, ಗಣತಿಯನ್ನು ಮಾಡಲು ಸ್ಥಳ (ಪ್ರದೇಶ)ನಿಗದಿಪಡಿಸಬೇಕು ಹಾಗೂ ನಿಗದಿಪಡಿಸಿದ ಸ್ಥಳದ ಮನೆಪಟ್ಟಿ ಸಿದ್ಧಪಡಿಸಿ ಗಣತಿದಾರರಿಗೆ ಪೂರೈಸಬೇಕೆಂದು ಆಗ್ರಹಿಸಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಕೊಂಡಿರುವ ಹಳಿಯಾಳ ತಾಲೂಕಿನ ಶಿಕ್ಷಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿ ತಾಲೂಕಾ ಆಡಳಿತ ಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.ಗೊಂದಲ ಬಗೆಹರಿಸಿ:
ಗಣತಿದಾರರ ಪರವಾಗಿ ಮಾತನಾಡಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯ್ಕ ಬಾವಿಕೇರಿ, ಹೆಸ್ಕಾಂ ಇಲಾಖೆಯವರು ಅಂಟಿಸಿರುವ ಮನೆಪಟ್ಟಿ ಆಧರಿಸಿ ಗಣತಿ ಮಾಡುವುದು ಸುಲಭ ಸಾಧ್ಯವಲ್ಲ. ಗೂಗಲ್ ಮ್ಯಾಪ್ ತೋರಿಸುವ ಮಾಹಿತಿಯನ್ನು ಹಿಂಬಾಲಿಸಿಕೊಂಡು ಮನೆಗಳನ್ನು ಹುಡುಕುತ್ತಾ ಹೋದರೇ ಮನೆ ಸಿಗುತ್ತಿಲ್ಲ, ಕೆಲವೆಡೆ ಗೂಗಲ್ ಮ್ಯಾಪ್ ತೋರಿಸುವ ಮನೆಗಳು ಪ್ರದೇಶಗಳು ಹೊರಜಿಲ್ಲೆ ಹಾಗೂ ಬೇರೆ ತಾಲೂಕಿನ ಪ್ರದೇಶ ತೋರಿಸುತ್ತವೆ. ಒಂದೇ ಪ್ರದೇಶವನ್ನು ಐದಾರು ಗಣತಿದಾರರಿಗೆ ಗೂಗಲ್ ತೋರಿಸುತ್ತಿರುವುದರಿಂದ ಗೊಂದಲ ಉಂಟಾಗುತ್ತದೆ ಎಂದರು.ಸರ್ವರ್, ನೆಟ್ವರ್ಕ್ ಸಮಸ್ಯೆ:ಶಿಕ್ಷಕರ ಸಂಘದ ಪ್ರಮುಖ ಪ್ರಶಾಂತ ನಾಯ್ಕ ಮಾತನಾಡಿ, ಗಣತಿ ಕಾರ್ಯ ಸೂಸೂತ್ರವಾಗಿ ನಡೆಯಬೇಕಾದರೇ ಸರ್ವರ್, ನೆಟ್ವರ್ಕ್ ಸಮಸ್ಯೆ ಸುಧಾರಿಸಬೇಕು, ನೆಟ್ ವರ್ಕ ಇಲ್ಲದೇ ಆ್ಯಪ್‌ನಲ್ಲಿ ಯಾವುದೇ ಮಾಹಿತಿ ಅಪ್ಲೋಡ್ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಬಿಇಒ ಪ್ರಮೋದ ಮಹಾಲೆ, ಗಣತಿ ಸರ್ಕಾರದ ಕೆಲಸವಾಗಿದ್ದು, ಅದಕ್ಕಾಗಿ ಗಣತಿದಾರರು ಸಹಕರಿಸಬೇಕು, ಗಣತಿ ಕಾರ್ಯಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು. ಬಿಸಿಎಂ ಅಧಿಕಾರಿ ಸುಜಾತಾ ಕಡತರೆ ಗಣತಿದಾರರು ಪ್ರಸ್ತಾಪಿಸಿದ ಎಲ್ಲಾ ಸಮಸ್ಯೆ ಮತ್ತು ಬೇಡಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುತ್ತೇವೆ ಎಂದರು.ಶಿಕ್ಷಕರಾದ ಸುನೀಲ ಗಾಂವಕರ, ಆನಂದ ತೋರ್ಲೆಕರ, ಗೋಪಾಲ ಅರಿ, ವೆಂಕಟೇಶ ನಾಯ್ಕ, ಮಂಜು ಗುನಗಾ ಹಾಗೂ ಇತರರು ಇದ್ದರು.