ಕನ್ನಡಪ್ರಭ ವಾರ್ತೆ ಅರಕಲಗೂಡು
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ತಮ್ಮ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾಲೂಕು ಪರವಾನಗಿ ಭೂಮಾಪಕರು ಕಳೆದೊಂದು ವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಟ್ಟು ಗುರುವಾರ ಕೆಲಸಕ್ಕೆ ಹಾಜರಾದರು.ಪಟ್ಟಣದ ಮಿನಿ ವಿಧಾನಸೌಧದ ಸರ್ಕಾರಿ ಭೂ ಮಾಪಕರ ಕಚೇರಿ ಆವರಣದಲ್ಲಿ ಕಳೆದೊಂದು ವಾರದಿಂದ ಧರಣಿ ಕುಳಿತಿದ್ದ ಭೂಮಾಪಕರು ಸರ್ಕಾರ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದರು. ಕಳೆದ ಇಪ್ಪತ್ತೈದು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದರೂ ಸರ್ಕಾರವು ಸಮಾನ ವೇತನ ಒದಗಿಸಿ ಸೇವೆ ಕಾಯಂಗೊಳಿಸದೆ ನಿರ್ಲಕ್ಷ್ಯ ವಹಿಸಿತ್ತು. ಕೆಲಸದ ಒತ್ತಡದ ನಡುವೆ ತಕರಾರು, ಕೋರ್ಟ್ ಆದೇಶ ಪ್ರಕರಣ, ಪೋಡಿಮುಕ್ತ, ಆಕಾರಬಂದ್, ಡಿಜಿಟೈಜೇಶನ್, ದರ್ಖಾಸ್ತು ಪೋಡಿ, ಸ್ವಮಿತ್ತ ಮತ್ತಿತರ ಪ್ರಕರಣಗಳನ್ನು ಒಳಗೊಂಡಂತೆ ಹಲವು ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರೂ ಸರಿಯಾದ ವೇತನ ಆಗಿರಲಿಲ್ಲ, ತಂತ್ರಾಂಶದಲ್ಲಿ ವಿಲೇ ಪ್ರಕರಣಗಳಿಗೆ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗಿದೆ. ಲಾಗಿನ್ ಅಲ್ಲದೆ ಇತರೆ ಕೆಲಸಗಳನ್ನು ವಹಿಸಲಾಗಿದೆ. ಭೂ ಮಾಪಕರ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲವಾಗಿದೆ. ಮುಷ್ಕರದ ಹಿನ್ನೆಲೆ ಸರ್ಕಾರ ಇದೀಗ ತಮ್ಮ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಹೀಗಾಗಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಪರವಾನಗಿ ಭೂ ಮಾಪಕರ ಸಂಘದ ತಾಲೂಕು ಅಧ್ಯಕ್ಷ ತುಳಸಿರಾಮ್ ಹೇಳಿದರು.
ಸರ್ಕಾರಿ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುಂದರ್ ಅವರಿಗೆ ಮನವಿ ಸಲ್ಲಿಸಲಾಯಿತು.ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ರಾಜ್ಯ ಸಮಿತಿ ಸದಸ್ಯ ವಿ. ಹೇಮಂತ್ ಕುಮಾರ್, ತಾಲೂಕು ಸಂಘದ ಉಪಾಧ್ಯಕ್ಷ ಕೆ.ಜೆ. ಕುಮಾರ್, ಸದಸ್ಯರಾದ ಬಿ.ಜೆ. ಶಿವರಾಜ್, ವಿನೋದ್, ಅಭಿಜಿತ್, ಮೋನಿಕ, ಗೌತಮ್, ಆದರ್ಶ, ಚೇತನ್, ಲೋಹಿತ್, ಯೋಗೇಶ್, ಶ್ರೀನಿವಾಸ್, ಎಲ್.ಬಿ. ಕುಮಾರ್, ಸತೀಶ್, ದೇವರಾಜು, ರವೀಂದ್ರ, ಶ್ರೀಧರ್, ಜಯಂತ್, ಮಂಜೇಗೌಡ ಇತರರು ಪಾಲ್ಗೊಂಡಿದ್ದರು.