ಗದಗ: ನಮ್ಮ ಆಚಾರ-ವಿಚಾರ, ನಡೆ-ನುಡಿ, ಆಹಾರ-ವಿಹಾರ ಮತ್ತು ನಿತ್ಯ ಜೀವನ ಕ್ರಮಗಳು ಭಾರತೀಯ ಸಂಸ್ಕೃತಿಯ ಪ್ರತೀಕಗಳಾಗಿವೆ. ಅಂಥವುಗಳಲ್ಲಿ ಸೂರ್ಯನಮಸ್ಕಾರವೂ ಒಂದಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ಸೂರ್ಯನಮಸ್ಕಾರವು ಸೂರ್ಯನಿಗೆ ವಂದನೆ ಸಲ್ಲಿಸುವುದಾದರೆ ಆರೋಗ್ಯದ ಹಿನ್ನೆಲೆಯಲ್ಲಿ ಕೆಲವು ಆಸನಗಳನ್ನೊಳಗೊಂಡ ವ್ಯಾಯಾಮ ಪದ್ಧತಿ ಹಾಗೂ ಗರಡಿ ಸಾಧನೆಯಾಗಿದೆ ಎಂದು ಡಿ.ಜಿ.ಎಂ. ಆಯುರ್ವೇದ ಕಾಲೇಜ್ ಪ್ರಾಚಾರ್ಯ ಡಾ. ಸಂತೋಷ ಬೆಳವಡಿ ಹೇಳಿದರು. ಅವರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸ್ವಸ್ಥ ವೃತ್ತ ವಿಭಾಗ ಮತ್ತು ಶಿವಾನಂದ ಯೋಗ ಕಾಲೇಜ್ ಗದಗ ಇವರ ಸಂಯುಕ್ತಾಶ್ರಯದಲ್ಲಿ ರಥಸಪ್ತಮಿ ಪ್ರಯುಕ್ತ ನಡೆಸಿದ ಸೂರ್ಯನಮಸ್ಕಾರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಜನತೆ ಮತ್ತು ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತಲಿದೆ. ಅವರಲ್ಲಿ ದೈಹಿಕ ಶಕ್ತಿ ಸಾಮರ್ಥ್ಯ ಹೆಚ್ಚಲು ಸೂರ್ಯ ನಮಸ್ಕಾರ ಸಾಧನೆಯು ಸುಲಭ ಸಾಧನಾ ಮಾರ್ಗವಾಗಿದೆ. ಈ ಸ್ಪರ್ಧೆ ಅವರಿಗೆ ಹೆಚ್ಚಿನ ಪ್ರೇರಣೆ ನೀಡಲೆಂದು ಆಶಿಸಿದರು. ಅತಿಥಿಗಳಾಗಿ ಆಗಮಿಸಿದ ದತ್ತಾತ್ರೆಯ ತಿರುಮಲೆ ಮಾತನಾಡಿ, ಆರೋಗ್ಯದಿಂದಿರಲು ಉತ್ತಮ ಆಹಾರ ಸೇವಿಸಬೇಕು, ದುಶ್ಚಟಗಳಿಂದ ದೂರಿರಬೇಕು ಮತ್ತು ನಿತ್ಯ ಸೂರ್ಯನಮಸ್ಕಾರ ವ್ಯಾಯಾಮ ಮಾಡಬೇಕೆಂದು ಸೂಚಿಸಿದರು. ಅತಿಥಿ ಯೋಗ ಶಿಕ್ಷಕ ಮೋಹನಸಾ ಕಬಾಡಿ, ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ. ಎಸ್. ಪಲ್ಲೇದ ಮುಂತಾದವರು ಮಾತನಾಡಿದರು.