ಮೈಸೂರಿಗರ ಮನಸೂರೆಗೊಂಡ ಸೂರ್ಯಕಿರಣ್‌ ಶೋ!

KannadaprabhaNewsNetwork |  
Published : Oct 20, 2026, 01:30 AM IST
ಸೂರ್ಯಕಿರಣ್‌ ಶೋ | Kannada Prabha

ಸಾರಾಂಶ

ದಸರಾದ 9ನೇ ದಿನವಾದ ಸೋಮವಾರ ಮೈಸೂರಿನಲ್ಲಿ ನಡೆದ ಏರ್ ಶೋ (ವೈಮಾನಿಕ ಪ್ರದರ್ಶನ), ನೆರೆದಿದ್ದ ಸಹಸ್ರಾರು ನೋಡುಗರನ್ನು ಬೆರಗುಗೊಳಿಸಿತು.

ಕನ್ನಡಪ್ರಭ ವಾರ್ತೆ ಮೈಸೂರು:

ದಸರಾದ 9ನೇ ದಿನವಾದ ಸೋಮವಾರ ಮೈಸೂರಿನಲ್ಲಿ ನಡೆದ ಏರ್ ಶೋ (ವೈಮಾನಿಕ ಪ್ರದರ್ಶನ), ನೆರೆದಿದ್ದ ಸಹಸ್ರಾರು ನೋಡುಗರನ್ನು ಬೆರಗುಗೊಳಿಸಿತು. ಕರ್ನಾಟಕದ ಎಚ್‌ಎಎಲ್‌ ನಿರ್ಮಿತ ಹಾಕ್‌ ಎಂಕೆ-132 ಸರಣಿಯ 9 ಜೆಟ್‌ ವಿಮಾನಗಳನ್ನು ಹೊಂದಿರುವ ಸೂರ್ಯಕಿರಣ್‌ ತಂಡ ಆಗಸದಲ್ಲಿ ಮೂಡಿಸಿದ ವಿವಿಧ ಚಮತ್ಕಾರದ ಚಿತ್ತಾರಕ್ಕೆ ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನ ರೋಮಾಂಚನಗೊಂಡರು.

ಮೋಡ ಕವಿದ ವಾತಾವರಣದಿಂದಾಗಿ ಭಾನುವಾರ ನಡೆದ ಏರ್ ಶೋ ಕೇವಲ 10 ನಿಮಿಷದೊಳಗೆ ಮೊಟಕುಗೊಂಡಿತ್ತು. ಆದರೆ, ಸೋಮವಾರ ಏರ್ ಶೋ ಪೂರ್ಣ ಪ್ರಮಾಣದಲ್ಲಿ ನಡೆಯಿತು.

ಇದೇ ವೇಳೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದ ಉರ್ದು ಕಾವ್ಯ ಸಂಜೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಕೆಶಿ, ಸಾಹಿತ್ಯ ಮನಸ್ಸುಗಳನ್ನು ಒಡೆಯೋದಿಲ್ಲ. ಬದಲಾಗಿ ಒಗ್ಗೂಡಿಸುತ್ತದೆ ಎಂದರು. ಇನ್ನು, ಮೈಸೂರಿನ ದಸರಾದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ದೇಶೀಯ ಹೋರಿ ತಳಿಯಾದ ಹಳ್ಳಿಕಾರ್ ಹಾಗೂ ಅಮೃತ್ ಮಹಲ್‌ ತಳಿಯ ಹೋರಿಗಳ ಪ್ರದರ್ಶನವನ್ನು ಸೋಮವಾರ ಏರ್ಪಡಿಸಲಾಗಿತ್ತು. ಇದೇ ವೇಳೆ 2 ದಿನಗಳ ಕಂಬಳಕ್ಕೆ ಸೋಮವಾರ ತೆರೆ ಬಿತ್ತು.

ಸಿಎಂರಿಂದ ದೀಪಾಲಂಕಾರ ವೀಕ್ಷಣೆ: ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೆಎಸ್‌ಟಿಡಿಸಿಯ ‘ಅಂಬಾರಿ’ ಬಸ್‌ನಲ್ಲಿ ಕುಳಿತು ನಗರದ ವಿವಿಧೆಡೆ ಸಂಚರಿಸಿ ದೀಪಾಲಂಕಾರವನ್ನು ಕಣ್ತುಂಬಿಕೊಂಡರು.ಸಿಎಂರಿಂದ ದೀಪಾಲಂಕಾರ ವೀಕ್ಷಣೆ:

ಇದೇ ವೇಳೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಎಸ್‌ಟಿಡಿಸಿಯ ‘ಅಂಬಾರಿ’ ಬಸ್‌ ನಲ್ಲಿ ಕುಳಿತು ನಗರದ ವಿವಿಧೆಡೆ ಸಂಚರಿಸಿ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ರಸ್ತೆ ಬದಿಯಲ್ಲಿ ನೆರೆದಿದ್ದ ಸಾರ್ವಜನಿಕರತ್ತ ಕೈಬೀಸುತ್ತಾ ಸಾಗಿದರು. ಅವರೊಂದಿಗೆ ಸಚಿವರು, ಶಾಸಕರು ಹಾಗೂ ‘ಸೆಸ್ಕ್‌’ ಅಧಿಕಾರಿಗಳು ಪಾಲ್ಗೊಂಡಿದ್ದರು.ತಾಲೀಮು ವೇಳೆ ಬೈಕ್ ಗಳ ಮುಖಾಮುಖಿ ಡಿಕ್ಕಿ:

ವಿಜಯದಶಮಿಯಂದು ಬನ್ನಿಮಂಟಪದಲ್ಲಿ ನಡೆಯಲಿರುವ ಬೈಕ್ ಸಾಹಸ ಪ್ರದರ್ಶನಕ್ಕೆ ಆಗಮಿಸಿರುವ ಮೋಟಾರ್ ಮಿಲಿಟರಿ ಪೊಲೀಸರ ಶ್ವೇತಾಶ್ವ ತಂಡದವರು ನಗರದ ಬನ್ನಿಮಂಟಪದಲ್ಲಿ ಸೋಮವಾರ ಸಂಜೆ ತಾಲೀಮು ನಡೆಸಿದರು. ತಾಲೀಮಿನ ವೇಳೆ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಇದರಿಂದ ಸೋಮವಾರ ನಡೆಯುತ್ತಿದ್ದ ತಾಲೀಮು ಅರ್ಧಕ್ಕೆ ಮೊಟಕುಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನು ಜನ ಸೇವಕ, ರಾಜ್ಯ ಸರ್ಕಾರದ ಸಾಧನೆ ಶ್ರೀರಕ್ಷೆ
ಸಂಧಾನ ಯಶಸ್ವಿ: ಶಾಂತವಾದ ಕಬ್ಬಿನ ಕಿಚ್ಚು!