ತೊರೆನೂರು ಭಾಗದಲ್ಲಿ ಹುಲಿ ಶಂಕೆ: ರೈತರ ಭೀತಿ

KannadaprabhaNewsNetwork |  
Published : Oct 11, 2026, 03:45 AM IST
ಹುಲಿ ಹೆಜ್ಜೆ, ಕಾರ್ಯಾಚರಣೆ. | Kannada Prabha

ಸಾರಾಂಶ

ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದ ಹಾರಂಗಿ ನೀರಾವರಿ ಪ್ರದೇಶದ ಚಿಕ್ಕನಾಯಕನಹೊಸಳ್ಳಿ ಭಾಗದ ರೈತರ ಜಮೀನಿನಲ್ಲಿ ಹುಲಿ ಸಂಚರಿಸುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಕುಶಾಲನಗರ : ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದ ಹಾರಂಗಿ ನೀರಾವರಿ ಪ್ರದೇಶದ ಚಿಕ್ಕನಾಯಕನಹೊಸಳ್ಳಿ ಭಾಗದ ರೈತರ ಜಮೀನಿನಲ್ಲಿ ಹುಲಿ ಸಂಚರಿಸುತ್ತಿದೆ ಎಂದು ರೈತರು ತಿಳಿಸಿದ್ದಾರೆ. ತೊರೆನೂರು ಕಂದಾಯ ಗ್ರಾಮದ ತೊರೆನೂರು ವಿರಕ್ತ ಮಠ, ಸರ್ಕಾರಿ ಪ್ರೌಢಶಾಲೆಯ ಸಮೀಪದ ಬನ, ಕೊಲ್ಲಿ ಪ್ರದೇಶ ಹಾಗೂ ಚಿಕ್ಕನಾಯಕನಹೊಸಳ್ಳಿ ವ್ಯಾಪ್ತಿಯ ರೈತರ ಜಮೀನಿನಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದೆ. ಕಳೆದ 5-6 ದಿನಗಳಿಂದ ಈ ಪ್ರದೇಶದಲ್ಲಿ ಹುಲಿ ಸಂಚರಿಸಿರುವುದಾಗಿ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆಯ ಸೋಮವಾರಪೇಟೆ ವಲಯದ ಆರ್.ಎಫ್.ಒ. ಮಲ್ಲೇಶ್, ಹುಲಿ ಸೆರೆ ಕಾರ್ಯಾಚರಣೆಗೆ ರ್ಯಾಪಿಡ್ ತಂಡವನ್ನು ಸ್ಥಳಕ್ಕೆ ಕಳಿಸಿದ್ದು, ಈ ಡಿಆರ್ ಎಫ್ ಓ ರೇಣುಕುಮಾರ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಹುಲಿ ಪತ್ತೆ ಗಸ್ತು: ಹುಲಿ ಪತ್ತೆಗೆ ಅರಣ್ಯ ಇಲಾಖೆಯು ಗಸ್ತು ನಡೆಸಲಾಗುತ್ತಿದೆ ಎಂದು ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ. ಈ ಭಾಗದಲ್ಲಿ ರೈತರು ಭತ್ತದ ಕೃಷಿ ಜತೆಗೆ ಶುಂಠಿ, ಕೆಸವಿನ ಗೆಡ್ಡೆ, ಅಡಿಕೆ, ಬಾಳೆ, ಮೆಕ್ಕೆಜೋಳ ಇತ್ಯಾದಿ ಬೆಳೆ ಕೈಗೊಂಡಿದ್ದು, ಹುಲಿಯ ಭಯದಿಂದ ರೈತರು ತಮ್ಮ ಜಮೀನಿಗೆ ನೀರು ಹಾಯಿಸಲು ಮತ್ತು ಕೃಷಿ ಕಾರ್ಯಕ್ಕೆ ತೆರಳಲು ಭೀತಿಗೊಂಡಿದ್ದಾರೆ ಎಂದು ತೊರೆನೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಕೆ.ವಸಂತ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗುರುವಾರ ಸಂಜೆ ಚಿಕ್ಕನಾಯಕನಹೊಸಹಳ್ಳಿ ಬಳಿ ಹುಲಿ ಸಂಚಾರ ಪತ್ತೆಹಚ್ಚಲು 4 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಅರಣ್ಯ ಸೇರಿದಂತೆ, ಹೆಬ್ಬಾಲೆ, ಹಳೇಕೋಟೆ, ಚಿನ್ನೇನಹಳ್ಳಿ, ತೊರೆನೂರು ಹಾಗೂ ಚಿಕ್ಕನಾಯಕನಹೊಸಳ್ಳಿ ಪ್ರದೇಶ ಹಾಗೂ ನೆರೆಯ ಅರಕಲಗೂಡು ತಾಲೂಕಿನ ಅರಗಲ್ಲು ಎಂಬ ಪ್ರದೇಶದ ಕೃಷಿ ಪ್ರದೇಶ ಅಥವಾ ಸಣ್ಣ ಕುರಚಲು ಕಾಡಿನಲ್ಲಿ ಈ ಹುಲಿಯು ಅಡಗಿರಬಹುದು ಎಂದು ಶಂಕಿಸಲಾಗಿದೆ.

ರೈತರ ಜಮೀನಿನಲ್ಲಿ ಒಂದು ವೇಳೆ ಹುಲಿ ಅಡಗಿದ್ದರೆ ತಕ್ಷಣದಲ್ಲಿ ಅದನ್ನು ಕಾಡಿಗಟ್ಟುವ ಅಥವಾ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕು ಎಂದು ಚಿಕ್ಕನಾಯಕನಹೊಸಳ್ಳಿಯ ರೈತರಾದ ಶೇಷಾಚಲ ಮತ್ತು ಟಿ.ಎಂ.ಸುರೇಶ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ದಕ್ಷ ಬಳಕೆ ಎಲ್ಲರಿಗೂ ಅನಿವಾರ್ಯ: ಅನಂತ ಪದ್ಮನಾಭ
ಪ್ರಜಾಪ್ರಭುತ್ವ ಆಶಯ ಅರಿಯಲು ಯುವಸಂಸತ್ತು ಸಹಕಾರಿ: ಪ್ರೊ.ಆಲೂರ