ಕಾಲೇಜಿಂದ ಸಸ್ಪೆಂಡ್‌ ಆಗಿದ್ದಕ್ಕೆನೊಂದು ವಿದ್ಯಾರ್ಥಿ ಆತ್ಮಹತ್ಯೆ

KannadaprabhaNewsNetwork |  
Published : Dec 30, 2023, 01:16 AM IST
Nikhil | Kannada Prabha

ಸಾರಾಂಶ

ವಿದ್ಯಾರ್ಥಿನಿಯ ಜತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಾಲೇಜಿಂದ ಅಮಾನತು ಆಗಿದ್ದ ವಿದ್ಯಾರ್ಥಿ ಆತ್ಮಹತ್ಯೆ,

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಲೇಜಿನಿಂದ ಅಮಾನತ್ತು ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಂದ್ರಾಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಭಾವಿಯ ವಿನಾಯಕ ಲೇಔಟ್‌ ನಿವಾಸಿ ನಿಖಿಲ್‌ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಗುರುವಾರ ರಾತ್ರಿ ಮನೆಯಲ್ಲೇ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥನಾಗಿದ್ದ ನಿಖಿಲ್‌ನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

ಏನಿದು ಪ್ರಕರಣ?:

ಮೃತ ನಿಖಿಲ್‌ ಬನ್ನೇರುಘಟ್ಟದ ಎಎಂಸಿ ಕಾಲೇಜಿನ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸಿನ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ತಿಂಗಳ ಹಿಂದೆ ವಿದ್ಯಾರ್ಥಿನಿ ಜತೆಗೆ ಅನುಚಿತವಾಗಿ ವರ್ತಿಸಿದ ಎಂಬ ಕಾರಣಕ್ಕೆ ಕಾಲೇಜಿನ ಆಡಳಿತ ಮಂಡಳಿ ನಿಖಿಲ್‌ನನ್ನು ಅಮಾನತು ಮಾಡಿತ್ತು. ಬಳಿಕ ನಿಖಿಲ್‌, ತಾಯಿಯ ಜತೆಗೆ ಕಾಲೇಜಿಗೆ ತೆರಳಿ ಕ್ಷಮೆಯಾಚಿಸಿ, ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದ. ಆದರೂ ಕಾಲೇಜಿನ ಆಡಳಿತ ಮಂಡಳಿ ಕಾಲೇಜಿಗೆ ಪ್ರವೇಶ ಕಲ್ಪಿಸಿರಲಿಲ್ಲ ಎಂದು ಆರೋಪಿಸಲಾಗಿದೆ.

ಡೀನ್‌, ಪ್ರಿನ್ಸಿಪಲ್‌ ವಿರುದ್ಧ ಕಿರುಕುಳ ಆರೋಪ:

ಕಾಲೇಜಿನ ಸಿಬ್ಬಂದಿ ನಿಖಿಲ್‌ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲೇಜಿನ ಹೊರಗೆ ಹೊಕಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಒಂದು ತಿಂಗಳಿಂದ ಕಾಲೇಜಿನ ಪ್ರಾಂಶುಪಾಲರು, ಡೀನ್‌ ನನ್ನ ಮಗನಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ನನ್ನ ಮಗ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.

ನಿಖಿಲ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೋಟ್‌ ಬುಕ್‌ನಲ್ಲಿ ಕಾಲೇಜಿನಲ್ಲಿ ನಡೆದ ಘಟನೆ ಬಗ್ಗೆ ಬರೆದಿರುವುದು ಕಂಡು ಬಂದಿದೆ. ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ