ಹುಬ್ಬಳ್ಳಿ: ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ ತನ್ನ ಬೇಜವಾಬ್ದಾರಿ ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳ ಅಮಾನತು ಮಾಡುವ ಮೂಲಕ ಗುಬ್ಬಿ ಮೇಲೆ ಬ್ರಹ್ಮಾಸ್ತ ಪ್ರಯೋಗ ಮಾಡಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ.
ಕಂಠೀರವ ಸ್ಟೇಡಿಯಂ ಬಳಿ ಸೇರಿದ ಜನಸ್ತೋಮವನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದೇ ಕಾಲ್ತುಳಿತಕ್ಕೆ ಕಾರಣ. ಇದು ಸರ್ಕಾರದ ವೈಫಲ್ಯವಲ್ಲದೇ ಮತ್ತೇನು ಅಲ್ಲ. ಕೂಡಲೇ ಸಿಎಂ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಆಯೋಜಿಸಲು ಹೇಳಿದವರು ಯಾರು ಎಂಬುದು ಈವರೆಗೆ ಹೊರಗೆ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದರು.ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ಅನೇಕರ ಮೇಲೆ ಕ್ರಮ ಕೈಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ,ಕಾರ್ಯಕ್ರಮ ಆಯೋಜನೆ ಮಾಡಿದ ನಿಮ್ಮ ಮೇಲೆ ಯಾರು ಎಫ್‌ಐಆರ್ ಮಾಡಬೇಕು..? ಎಂದು ಶಾಸಕ ಟೆಂಗಿನಕಾಯಿ ಪ್ರಶ್ನಿಸಿದ್ದಾರೆ.