ಮಾಂಬಳ್ಳಿ ಠಾಣಾ ಪೊಲೀಸರಿಬ್ಬರ ಅಮಾನತು

KannadaprabhaNewsNetwork | Published : Jun 17, 2024 1:36 AM

ಸಾರಾಂಶ

ಮಾಂಬಳ್ಳಿ ಪೊಲೀಸರು ಬಂಧನದಲ್ಲಿರುವ ಆರೋಪಿಯನ್ನು ನಿಯಮ ಉಲ್ಲಂಘಿಸಿ ಕಾರಾಗೃಹದಲ್ಲಿ ಭೇಟಿಯಾದ ಸುದ್ದಿಯನ್ನು ಕನ್ನಡಪ್ರಭ ಪ್ರಕಟಿಸಿತ್ತು .

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಅಂತಹ ಶಿಸ್ತಿನ ಇಲಾಖೆಯ ಹೆಸರಿಗೆ ಕಳಂಕ ತಂದು ಅಶಿಸ್ತು, ದುರ್ನಡತೆ ಪ್ರದರ್ಶಿಸಿದ್ದ ಹಿನ್ನೆಲೆ ಹಾಗೂ ಕಾರಾಗೃಹದಲ್ಲಿರುವ ಆರೋಪಿಯೊಬ್ಬನನ್ನು ಭೇಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಂಬಳ್ಳಿ ಠಾಣೆಯ ಪೊಲೀಸರಿಬ್ಬರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೇ ಒತ್ತಡಗಳನ್ನು ಲೆಕ್ಕಿಸದೆ ಅಮಾನತುಗೊಳಿಸಿ ದಿಟ್ಟತನ ಮೆರೆದಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಹಂಪಾಪುರ ನಟೇಶ್, ಪೇದೆ ಮದ್ದೂರಿನ ಸೋಮು ಅಮಾನತುಗೊಂಡ ಪೊಲೀಸರು. ಇತ್ತೀಚೆಗೆ ಎಎಸ್ಸೈ ಶಿವರುದ್ರ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿದ್ದ ಆರೋಪಿ ಮಲ್ಲೇಶ್ ಅಲಿಯಾಸ್ ಪ್ರದೀಪ್ ಎಂಬುವರನ್ನು ಚಾ.ನಗರ ಜಿಲ್ಲಾ ಕಾರಾಗೃಹದಲ್ಲಿ ಭೇಟಿಯಾಗಿದ್ದರು. ಭೇಟಿಯ ವೇಳೆ ಜಿಲ್ಲಾ ಕಾರಾಗೃಹ ಅಧಿಕಾರಿಗಳನ್ನಾಗಲಿ, ನ್ಯಾಯಾಧೀಶರ ಅನುಮತಿಯನ್ನಾಗಲಿ ಪಡೆದಿರಲಿಲ್ಲ, ಮಾತ್ರವಲ್ಲ ಪೊಲೀಸ್ ಇಲಾಖೆಯ ಯುನಿಫಾರಂ ಧರಿಸಿಯೇ ಭೇಟಿ ಮಾಡಿ 1ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದರು. ಅಲ್ಲದೆ ಭೇಟಿ ವೇಳೆ ಅಪರಾಧಿಗಳ ಭೇಟಿಗೆ ಸಂಬಂಧಿಸಿದಂತೆ ಕಾರಾಗೃಹದಲ್ಲಿರಿಸಲಾಗಿದ್ದ ಭೇಟಿಯಾದವರ ವಿವರ ಕುರಿತ ಪುಸ್ತಕಕ್ಕೆ ಸಹಿ ಹಾಕದೆ ಚಾಣಾಕ್ಷತನ ಮೆರೆದಿದ್ದರು. ಆದರೆ ದುರಾದೃಷ್ಟ ಅವರನ್ನು ಬೆನ್ನು ಹತ್ತಿತ್ತು. ಆರೋಪಿ ಭೇಟಿಯಾಗಿ ಬಂದ ಬಳಿಕ ಇವರ ಭೇಟಿಯದ್ದು ಹೆಚ್ಚಿನ ರೀತಿಯಲ್ಲಿ ಸುದ್ದಿಯಾಗಿ ಹರಡಿದ ಹಿನ್ನೆಲೆ ಹಾಗೂ ಸಾಕಷ್ಟು ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ ಇವರು ಸಿಕ್ಕಿಬಿದ್ದರು.

ಈ ವೇಳೆ ಅಧಿಕಾರಿಗಳು ತರಾಟೆ ತೆಗೆದುಕೊಂಡ ವೇಳೆ ಸೋಮ ನನ್ನನ್ನು ಕರೆದುಕೊಂಡು ಹೋಗಿದ್ದು, ನನಗೆ ಆರೋಪಿ ಪರಿಚಯವಿಲ್ಲ ಎಂಬುದನ್ನು ನಟೇಶ ಅವರು ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳಿಗೆ ಹೇಳಿದ್ದರು. ಎಂಬುದು ಇಲಾಖಾ ಪಡಸಾಲೆಯಲ್ಲಿಯೇ ಸದ್ದು ಮಾಡುತ್ತಿದೆ. ಅಲ್ಲದೆ ಕಾರಾಗೃಹಕ್ಕೆ ತೆರಳುವ ವೇಳೆ ನಾವು ಮೈಸೂರಿನ ಪೊಲೀಸರು ಎಂದು ಕಾರಾಗೃಹದ ಸಿಬ್ಬಂದಿಳಿಗೆ ತಪ್ಪು ಮಾಹಿತಿ ರವಾನಿಸಿದ್ದರು ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ಇವರ ಬೇಟಿಯನ್ನು ದೖಡಪಡಿಸಿಕೊಂಡ ಹಿನ್ನೆಲೆ ದಕ್ಷ ಅಧಿಕಾರಿ ಎಸ್ಪಿ ಪದ್ಮಿನಿ ಸಾಹು ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ತಕ್ಷಣ ವರದಿಗೂ ಎಸ್ಪಿ ಸೂಚಿಸಿದ್ದರು. ಡಿವೈಎಸ್ಪಿ ಧಮೇಂದ್ರ, ವೃತ್ತ ನಿರೀಕ್ಷಕ ಶ್ರೀಕಾಂತ್ ಅವರು ಇಬ್ಬರು ಪೊಲೀಸರ ಕಾರ್ಯವೈಖರಿಗೆ ಸಿಟ್ಟಾಗಿದ್ದರು. ಮಾತ್ರವಲ್ಲ ತಕ್ಷಣ ಹಿರಿಯ ಅಧಿಕಾರಿಗಳಿಗೆ ಸಿಸಿಟಿವಿ ದೖಶ್ಯಾವಳಿಯ ಸಮೇತ ವರದಿ ಸಲ್ಲಿಸಿದ್ದರು. ಆರೋಪಿ ಜಾಮೀನಿಗೂ ಸಹ ಇಬ್ಬರ ಪೈಕಿ ಒಬ್ಬ ವಕೀಲರಿಗೆ ಹಣ ಸಂದಾಯ ಮಾಡಿದ್ದ ಎನ್ನಲಾಗಿದ್ದು ಈ ವಿಚಾರ ಸಹ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸದ್ದುಮಾಡುತ್ತಿದೆ. ಅಲ್ಲದೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಬಂಧಿತನಾಗುವ ಮುನ್ನ ಹಲವಾರು ಬಾರೀ ತಮ್ಮ ಮೊಬೈಲ್ ಸಂಖ್ಯೆಯಿಂದಲೇ ಸಾಕಷ್ಟು ಬಾರಿ ಸಂಭಾಷಣೆ ನಡೆಸಿದ್ದ ವಿಚಾರವೂ ಸಹಾ ಇಲಾಖಾಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ತಮ್ಮ ಸಿಬ್ಬಂದಿ ಎಎಸ್ಸೈ ಪರ ನಿಲ್ಲಬೇಕಾದ ಇವರು ಪೊಲೀಸ್ ಇಲಾಖೆಯಲ್ಲಿದ್ದು ಆರೋಪಿ ಸ್ಥಾನದಲ್ಲಿರುವಾತನಿಗೆ ಸಹಾಯ ಮಾಡಿದ ಹಿನ್ನೆಲೆ ಹಾಗೂ ಇಲಾಖಾ ಮಾಹಿತಿ ಆರೋಪಿಗೆ ನೀಡುತ್ತಿದ್ದ ಆರೋಪದಡಿ ಅವರನ್ನು ಕರ್ತವ್ಯಲೋಪದಡಿ ಅಮಾನತುಗೊಳಿಸಿ ಎಸ್ಪಿ ಪದ್ಮಿನಿ ಸಾಹು ಆದೇಶಿಸಿದ್ದಾರೆ.

ಅಮಾನತು ಮಾಡದಂತೆ ಹೆಚ್ಚಿದ ಒತ್ತಡ:

ಕರ್ತವ್ಯಲೋಪವೆಸಗಿ ಆರೋಪಿ ಜೊತೆ ಚರ್ಚಿಸಿದ ಹಾಗೂ ನ್ಯಾಯಾಂಗ ಬಂಧನದಲ್ಲಿರುವ ವೇಳೆ ಭೇಟಿಯಾದ ಇಬ್ಬರು ಪೊಲೀಸರು ತಮ್ಮನ್ನು ಅಮಾನತು ಮಾಡದಂತೆ ಅನೇಕ ಪ್ರಭಾವಿಗಳ ಮೂಲಕ ಒತ್ತಡ ಹಾಕಿಸಿದ್ದ ವಿಚಾರವೂ ಈಗ ಇಲಾಖೆಯಲ್ಲಿ ಸದ್ದುಮಾಡುತ್ತಿದೆ. ಅಲ್ಲದೆ ಮಂಡ್ಯ ಹಾಗೂ ಚಾ.ನಗರ ಎರಡು ಜಿಲ್ಲೆಗಳ ಮಾಜಿ ಶಾಸಕರಿಬ್ಬರು ಸಹಾ ಅಮಾನತು ಮಾಡದಂತೆ ಪ್ರಭಲ ಒತ್ತಡ ಹಾಕಿದ್ದರು ಎಂದು ಹೇಳಲಾಗಿದೆ. ಇಬ್ಬರಿಗೂ ಅಮಾನತ್ತಾಗುತ್ತೇವೆ ಎಂಬುದು ಖಚಿತವಾಗುತ್ತಿದ್ದಂತೆ ರಜೆ ಹಾಕಿ ತೆರಳುವ ಹುನ್ನಾರ ನಡೆಸಿದ್ದರು, ಇದಕ್ಕೆ ಪಿಎಸ್ಸೈ ಕರಿಬಸಪ್ಪ ಸೇರಿದಂತೆ ಇಲಾಖಾಧಿಕಾರಿಗಳು ಅನುಮತಿ ನೀಡಲಿಲ್ಲ ಎನ್ನಲಾಗಿದೆ. ಅಲ್ಲದೆ ಇವರಿಬ್ಬರು ತಮ್ಮ ಮೇಲಾಧಿಕಾರಿಗಳಾದ ಪಿಎಸೈ ಕರಿಬಸಯ್ಯ ಜೊತೆಯೂ ಸಹಾ ಹಲವು ವಿಚಾರಗಳಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಆರೋಪಿಯನ್ನು ಯುನಿಫಾರಂ ಧರಿಸಿಯೇ ಭೇಟಿ ಮಾಡಿ ಸದ್ದು ಮಾಡಿದ್ದ ಇಬ್ಬರು ಪೊಲೀಸರ ಈ ಪ್ರಕರಣ ಈಗ ಚಾ.ನಗರ ಜಿಲ್ಲೆಯಲ್ಲೆ ಪ್ರಥಮ ಪ್ರಕರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಸಂಬಂಧ ಕನ್ನಡಪ್ರಭ ಜೂ.15ರ ಪತ್ರಿಕೆಯಲ್ಲಿ ಬಂದನದಲ್ಲಿರುವ ಆರೋಪಿ ಭೇಟಿ ಮಾಡಿದ ಪೊಲೀಸರು ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದ ಬೆನ್ನಲ್ಲೆ ಇಲಾಖೆ ಸಹಾ ದಿಟ್ಟ ಕ್ರಮಕೈಗೊಂಡಿದೆ, ಮಾತ್ರವಲ್ಲ ಪತ್ರಿಕೆ ವರದಿ ಎಲ್ಲೆಡೆ ಚರ್ಚೆಗೂ ಗ್ರಾಸವಾಗಿದ್ದನ್ನ ಇಲ್ಲಿ ಸ್ಮರಿಸಬಹುದು.

Share this article