- ಕಡೂರು ತಾಲೂಕು ಮದಗದ ಕೆರೆ ಬಳಿ ಮೃತಪಟ್ಟ ಚಿರತೆ । ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಡೂರು ತಾಲೂಕಿನ ಮದಗದ ಕೆರೆ ಬಳಿ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿಯ ತುರುವೇಕೆರೆ ವಲಯದ ದೇವಿಹಳ್ಳ ಬಳಿ ಬೋನಿಗೆ ಬಿದ್ದಿದ್ದ ಚಿರತೆಯನ್ನು ಕಡೂರು ತಾಲೂಕಿನ ಮದಗದ ಕೆರೆ ಬಳಿ ಅರಣ್ಯ ಇಲಾಖೆ ಅಧಿಕಾರಿಗಳೇ ತಂದು ಬಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಚಿರತೆಯನ್ನು ತಂದಿದೆ ಎನ್ನಲಾದ ಲಾರಿಯ ಸಿಸಿಟಿವಿ ವೀಡಿಯೋಗಳು ಇದೀಗ ವೈರಲ್ ಆಗಿವೆ.
ಒಂದು ಭಾಗದಲ್ಲೆ ಸೆರೆ ಹಿಡಿದ ಚಿರತೆಗಳನ್ನು ಇನ್ನೊಂದು ಭಾಗದಲ್ಲಿ ಬಿಡುವಾಗ ಆ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಬೇಕು. ಜೊತೆಗೆ ಕೆಲ ಕಾನೂನು ಪಾಲಿಸಬೇಕು. ಆದರೆ, ಮದಗದ ಕೆರೆ ಬಳಿ ಮೃತಪಟ್ಟ ಚಿರತೆಗೆ ಸಂಬಂಧಿಸಿ ದಂತೆ ಯಾವುದೇ ಕಾನೂನು ಪಾಲನೆ ಮಾಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದಲ್ಲದೆ ಚಿಕ್ಕ ನಾಯಕನಗಳ್ಳಿ ಆರ್‌ಎಫ್‌ಒ ಮೇಲೆ ವನ್ಯಜೀವಿ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಚಿಕ್ಕನಾಯಕನಹಳ್ಳಿ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ಮದಗದ ಕೆರೆ ಬಳಿ ಚಿರತೆ ಬಿಡಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಬಳಸಿದ ಮಿನಿ ಲಾರಿ ಹಲವು ಸಿಸಿಟಿವಿ ತುಣುಕುಗಳ ಸಾಕ್ಷಿ ಲಭಿಸಿವೆ. ಅರಣ್ಯಾಧಿಕಾರಿ ಅಮಿತ್ ಅರಸೀಕೆರೆ ವಲಯ ಅರಣ್ಯಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಆ ಭಾಗದಲ್ಲಿ ಬೋನ್ ಇಟ್ಟು ಸೆರೆ ಹಿಡಿದ ಚಿರತೆಗಳನ್ನು ಕಡೂರು ತಾಲೂಕಿನ ಮದಗದ ಕೆರೆ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು ಚಿರತೆ ಬಿಟ್ಟಿದ್ದಾರೆ ಎಂದು ವನ್ಯಜೀವಿ ಪ್ರೇಮಿಗಳು ಆರೋಪಿಸಿದ್ದಾರೆ.ತರಾತುರಿಯಲ್ಲಿ ಕಾರ್ಯಾಚರಣೆ:
ತುರುವೇಕೆರೆ ವಲಯದ ದೇವಿಹಳ್ಳಿ ಬಳಿ ಬೋನಿಗೆ ಬಿದ್ದ ಗಂಡು ಚಿರತೆಯನ್ನು ಎಮ್ಮೆದೊಡ್ಡಿ ವ್ಯಾಪ್ತಿಯ ಮದಗದ ಕೆರೆ ವ್ಯಾಪ್ತಿ ಯಲ್ಲಿ ಬುಧವಾರ ತಡ ರಾತ್ರಿ ತಂದು ಬಿಡಲಾಗಿತ್ತು ಎನ್ನಲಾಗುತ್ತಿದೆ. ತುರುವೇಕೆರೆ ಯಿಂದ ಚಿರತೆ ತರುವಾಗ ಬಾಣಾವರ ಸಮೀಪದ ಟೋಲ್ ಗೇಟ್‌ನಲ್ಲಿ ಕೂಡ ಜಗಳ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.ಕಡೂರು ನಗರದಲ್ಲಿ ಚಿರತೆ ಸಾಗಣೆ ಮಾಡುತ್ತಿದ್ದ ಮಿನಿ ಲಾರಿ ಹಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೊತೆಗೆ ವಲಯ ಅರಣ್ಯಾಧಿಕಾರಿ ಅಮಿತ್ ಇದ್ದ ಬೊಲೆರೋ ವಾಹನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೊಲೆರೋ ವಾಹನ ಒಂದು ಕಡೆ ಚಿರತೆ ಇದ್ದ ವಾಹನ ಇನ್ನೊಂದು ಕಡೆಯಿಂದ ಮದಗದ ಕೆರೆ ಬಳಿ ಬಂದಿವೆ. ಕದ್ದು ತರಾತುರಿಯಲ್ಲಿ ಚಿರತೆಯನ್ನು ಬಿಟ್ಟು ಹೋಗಿ ದ್ದಾರೆ ಎಂದು ಗೌರವ ವನ್ಯಜೀವಿ ಪರಿಪಾಲಕ ವೀರೇಶ್ ಆರೋಪಿಸಿದ್ದಾರೆ.
ಈ ಹಿಂದೆ ಅಮಿತ್ ಅರಸೀಕೆರೆ ವಲಯ ಅರಣ್ಯಾಧಿಕಾರಿ ಆಗಿದ್ದಾಗ ಹಾಗೂ ಚಿಕ್ಕನಾಯಕನಹಳ್ಳಿಗೆ ಬಂದ ಮೇಲೆ ಎಷ್ಟು ಚಿರತೆ ಸೆರೆ ಹಿಡಿದಿದ್ದಾರೆ ಹಾಗೂ ಎಲ್ಲಿ ಬಿಟ್ಟಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು. ಅಧಿಕಾರಿಗಳ ತಪ್ಪಿನಿಂದ ಮದಗದ ಕೆರೆ, ಸಿದ್ದರಹಳ್ಳಿ ಭಾಗದ ಅಮಾಯಕ ಜನರು ಚಿರತೆ ದಾಳಿಗೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಮೊದಲೇ ಬಳಲಿದ್ದ ಚಿರತೆಗೆ ಆಹಾರ ಇರಲಿಲ್ಲ. ಹೀಗಾಗಿ ಅದು ಜನರ ಮೇಲೆ ದಾಳಿ ಮಾಡಿರುವ ಸಾಧ್ಯತೆಯಿದೆ. ಈ ವೇಳೆ ಜನರ ಕಲ್ಲೇಟಿನಿಂದ ಚಿರತೆ ಮೃತಪಟ್ಟಿದೆ. ಇದಕ್ಕೆ ಕಾರಣರಾದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ತನಿಖಾ ಸಮಿತಿ ರಚನೆ: ಮದಗದ ಕೆರೆ ಬಳಿ ಚಿರತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಮತ್ತು ತುರುವೇಕೆರೆಯಿಂದ ಚಿರತೆ ತಂದು ಬಿಡಲಾಗಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಗಳನ್ನೊಳಗೊಂಡ ತನಿಖಾ ಸಮಿತಿ ರಚಿಸಲಾಗಿದೆ.
ಚಿಕ್ಕನಾಯಕನಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ತಂದು ಬಿಟ್ಟಿರುವ ಆರೋಪ ನಿರಾಕರಿದ್ದಾರೆ ಆದರೆ ವನ್ಯ ಜೀವಿ ಪ್ರಿಯರು ಚಿರತೆ ಸಾಗಣೆ ಸಿಸಿಟಿವಿ ವೀಡಿಯೋ ಸಾಕ್ಷಿ ನೀಡಿದ್ದಾರೆ. ಹೀಗಾಗಿ ತನಿಖಾ ಸಮಿತಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.--- ಬಾಕ್ಸ್ ---ಅರಣ್ಯ ಇಲಾಖೆ ಶಿಷ್ಟಾಚಾರ ಉಲ್ಲಂಘನೆ- ತುರುವೇಕೆರೆಯಿಂದ ಕಡೂರು ತಾಲೂಕಿನ ಮದಗದ ಕೆರೆ ವ್ಯಾಪ್ತಿಯಲ್ಲಿ ಚಿರತೆ ಬಿಡುವಾಗ ಯಾವುದೇ ವನ್ಯಜೀವಿ ವೈದ್ಯರು ಇರಲಿಲ್ಲ.- ಚಿರತೆಯನ್ನು ಮಿನಿ ಲಾರಿಯಲ್ಲಿ ಬೋನು ಸಮೇತ ತರುವಾಗಲೂ ಯಾವುದೇ ಪಶು ವೈದ್ಯಾಧಿಕಾರಿ ಇರಲಿಲ್ಲ. ಚಿರತೆಗೆ ನೀರು ಸಹ ಕೊಡದೆ ತುಂಬಾ ದೂರ ತರಲಾಗಿದೆ.
- ಚಿರತೆ ಬಿಡುವ ಕಾರ್ಯಾಚರಣೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ.- ಯಾವುದೇ ಮಹಜರು ಅಥವಾ ಸ್ಥಳ ದಾಖಲೆ ಮಾಡಿಲ್ಲ.
- ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಕಡೂರು ವಲಯದ ಅಧಿಕಾರಿಗಳ ಅನುಮತಿ ಪಡೆಯದೆ ಮದಗದ ಕೆರೆ ಎಮ್ಮೆದೊಡ್ಡಿ ಸಮೀಪ ಚಿರತೆ ತಂದು ಬಿಟ್ಟಿರುವುದು ಅಪರಾಧ.- ವನ್ಯಜೀವಿ ಕಾಯಿದೆ ಪ್ರಕಾರ ಒಂದು ವನ್ಯಪ್ರಾಣಿ ಟ್ರಾನ್ಸ್ ಪೋರ್ಟ್ ಮಾಡುವಾಗ ಕಡ್ಡಾಯವಾಗಿ ಅನುಮತಿ ಬೇಕು.ಇದು ಚಿರತೆಯ ಅಪಹರಣ ಪ್ರಕರಣ ಅಗಿದೆ.
-- ಕೋಟ್--ಚಿಕ್ಕನಾಯಕನಹಳ್ಳಿ ವಲಯದಲ್ಲಿ ಸೆರೆಹಿಡಿದ ಚಿರತೆಯನ್ನು ಕಡೂರು ತಾಲೂಕು ಮದಗದ ಕೆರೆ ಬಳಿ ತಂದು ಬಿಟ್ಟಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ನಮ್ಮ ವ್ಯಾಪ್ತಿಯಲ್ಲಿ ಬೇರೆ ಕಡೆಯಿಂದ ಚಿರತೆ ತಂದು ಬಿಡಲು ಅನುಮತಿ ಪಡೆಯಬೇಕು. ಆದರೆ ಯಾರೂ ನಮ್ಮಿಂದ ಅನುಮತಿ ಪಡೆದಿಲ್ಲ. ಜೊತೆಗೆ ಚಿರತೆ ತಂದು ಬಿಟ್ಟಿರುವ ಆರೋಪವನ್ನು ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ತನಿಖೆ ಬಳಿಕ ವಾಸ್ತವ ಬೆಳಕಿಗೆ ಬರಲಿದೆ.ರಮೇಶ್ ಬಾಬು,
ಡಿಎಫ್‌ಒ ಚಿಕ್ಕಮಗಳೂರು 2 ಕೆಸಿಕೆಎಂ 4-------------------------------
------------------------------ಪೋಟೋ ಫೈಲ್ ನೇಮ್ 2 ಕೆಸಿಕೆಎಂ 3ತುರುವೇಕೆರೆಯಿಂದ ಕಡೂರು ತಾಲೂಕಿನ ಮದಗದಕೆರೆ ಬಳಿ ಚಿರತೆಯನ್ನು ತಂದು ಬಿಡಲು ಬಳಸಲಾಗಿದೆ ಎಂದು ಹೇಳಲಾಗುತ್ತಿರುವ ವಾಹನ.