)
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಕೆಲ ವ್ಯಕ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹುಬ್ಬಳ್ಳಿಯಲ್ಲಿ ಇದೇ ರೀತಿಯ ತಪಾಸಣೆ ನಡೆದಿದ್ದು, ಮೂರು ಬಸ್‌ಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಬೆಳಗಾವಿಗೆ ಬಂದಿರುವ ಶಂಕೆ ಇದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ನೇತೃತ್ವದ ತಂಡ ಆರೋಪಿಸಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಡಿಸಿಪಿ ನಾರಾಯಣ ಭರಮನಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಕೇಂದ್ರ ಬಸ್ ನಿಲ್ದಾಣದಿಂದ ಮಾಳಮಾರುತಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಅಲ್ಲಿ ಪ್ರತಿಯೊಬ್ಬರ ಗುರುತಿನ ದಾಖಲೆಗಳು, ಮೊಬೈಲ್ ಸಂಖ್ಯೆಗಳು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆ ಕೈಗೊಳ್ಳಲಾಯಿತು. ದಾಖಲೆಗಳಲ್ಲಿರುವ ಮಾಹಿತಿಯನ್ನು ಮೊಬೈಲ್ ಹಾಗೂ ಡಿಜಿಟಲ್ ವ್ಯವಸ್ಥೆಗಳ ಮೂಲಕ ತಾಳೆ ಹಾಕಿ ಪರಿಶೀಲಿಸುವ ಕಾರ್ಯವೂ ನಡೆಯಿತು.ಪೊಲೀಸರ ವಿಚಾರಣೆ ವೇಳೆ ವಶಕ್ಕೆ ಪಡೆಯಲಾದವರು ತಾವು ಬಾಂಗ್ಲಾದೇಶ ಮೂಲದವರಲ್ಲ ಎಂದು ಸ್ಪಷ್ಟಪಡಿಸಿದರು. ನಾವು ಪಶ್ಚಿಮ ಬಂಗಾಳದ ನಿವಾಸಿಗಳು. ಬೆಳಗಾವಿಯ ಶಹಾಪುರ ಪ್ರದೇಶದಲ್ಲಿ ಅಕ್ಕಸಾಲಿಗರಾಗಿ (ಬಂಗಾರದ ಕೆಲಸ) ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದರಿಂದ ಮತದಾನ ಮಾಡಲು ಊರಿಗೆ ತೆರಳಿದ್ದೆವು. ಈಗ ಮತ್ತೆ ಕೆಲಸಕ್ಕೆ ಮರಳುತ್ತಿದ್ದೇವೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ದಾಖಲೆಗಳ ಕೂಲಂಕಷ ಪರಿಶೀಲನೆ:
ಆದಾಗ್ಯೂ ಸುರಕ್ಷತಾ ದೃಷ್ಟಿಯಿಂದ ಎಲ್ಲರ ಹೆಬ್ಬೆರಳ ಗುರುತುಗಳನ್ನು ಪಡೆದು ಹೆಚ್ಚಿನ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ದಾಖಲೆಗಳು ನಕಲಿಯೇ ಅಥವಾ ಅಸಲಿಯೇ ಎಂಬುದರ ಕುರಿತು ಇನ್ನಷ್ಟು ದೃಢೀಕರಣ ಪ್ರಕ್ರಿಯೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಭೇಟಿ ನೀಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್, ಹುಬ್ಬಳ್ಳಿಯಲ್ಲಿ ಕೆಲವರನ್ನು ಈಗಾಗಲೇ ತಪಾಸಣೆ ಮಾಡಲಾಗಿದೆ. ಮೂರು ಬಸ್‌ಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬೆಳಗಾವಿಗೆ ಬಂದಿರುವ ಮಾಹಿತಿ ಸಿಕ್ಕಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪ್ರತಿಯೊಬ್ಬರನ್ನೂ ಪರಿಶೀಲಿಸಬೇಕು. ಅಕ್ರಮ ವಲಸಿಗರ ಪ್ರವೇಶದ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆರಂಭಗೊಂಡ ಈ ಕಾರ್ಯಾಚರಣೆ ಕೆಲಕಾಲ ಸಾರ್ವಜನಿಕರ ಗಮನ ಸೆಳೆಯಿತು. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಆಗಮಿಸಿದ್ದರಿಂದ ಪ್ರಯಾಣಿಕರಲ್ಲಿ ಕುತೂಹಲ ಮೂಡಿತ್ತು. ಬಳಿಕ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿಯೂ ದಾಖಲೆ ಪರಿಶೀಲನೆ ಕಾರ್ಯ ನಡೆದಿದ್ದು, ಸಂಜೆ ವೇಳೆಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. ಅಕ್ರಮ ಬಾಂಗ್ಲಾ ವಲಸಿಗರ ಶಂಕೆಯಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಪ್ರಾಥಮಿಕ ತನಿಖೆಯ ಬಳಿಕ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರೇ ಎಂಬುದು ಬೆಳಕಿಗೆ ಬಂದಿದ್ದು, ಅಂತಿಮ ತಾಂತ್ರಿಕ ಪರಿಶೀಲನೆಯ ವರದಿಗಾಗಿ ಪೊಲೀಸ್ ಇಲಾಖೆ ಕಾಯುತ್ತಿದೆ.