ಸವಣೂರು: ಆಸ್ತಿ ಹಂಚಿಕೆ ವಿಚಾರವಾಗಿ ಅಣ್ಣ-ತಂಗಿಯರ ನಡುವೆ ಉಂಟಾಗಿದ್ದ ತೀವ್ರ ಮನಸ್ತಾಪ ಮಧ್ಯೆ 75 ವರ್ಷದ ವೃದ್ಧನೊಬ್ಬರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತ ಗುರುಬಸಪ್ಪ ಅವರಿಗೆ ಹಿರಿಯ ಪುತ್ರ ರವಿ ಬಸಾಪುರ ಹಾಗೂ ಪುತ್ರಿಯರಾದ ರೇಖಾ, ಸುಜಾತಾ, ಗಿರಿಜಾ ಮತ್ತು ಪಾರ್ವತಿ ಸೇರಿ ಐವರು ಮಕ್ಕಳು ಇದ್ದಾರೆ. ಗುರುಬಸಪ್ಪ ಅವರ ಹೆಸರಿನಲ್ಲಿ ಸುಮಾರು 27 ಎಕರೆ ಕೃಷಿ ಜಮೀನು ಇದ್ದು, ಇತ್ತೀಚೆಗೆ ಪುತ್ರಿಯರಿಗೂ ಆಸ್ತಿಯಲ್ಲಿ ಪಾಲು ನೀಡಿರುವುದಾಗಿ ತಿಳಿದುಬಂದಿದೆ.
ಈ ನಿರ್ಧಾರದಿಂದ ಹಿರಿಯ ಪುತ್ರ ರವಿ ಬಸಾಪುರ ಅಸಮಾಧಾನಗೊಂಡಿದ್ದರು ಎಂಬುದು ಸಹೋದರಿಯರ ಆರೋಪವಾಗಿದೆ. ಹೆಣ್ಣು ಮಕ್ಕಳಿಗೂ ಆಸ್ತಿ ಹಂಚಿಕೆ ಮಾಡಿದ್ದ ಕಾರಣಕ್ಕೆ ತಂದೆಯನ್ನು ರವಿ ಬಸಾಪುರ ಕೊಲೆ ಮಾಡಿದ್ದಾನೆ ಎಂದು ಸಹೋದರಿಯರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.ಇದಕ್ಕೆ ಪ್ರತಿಯಾಗಿ ರವಿ ಬಸಾಪುರ, ತಮ್ಮ ಸಹೋದರಿಯರೇ ಆಸ್ತಿ ವಿಚಾರಕ್ಕಾಗಿ ತಂದೆಯನ್ನು ಕೊಲೆ ಮಾಡಿ ತನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಆಸ್ತಿ ಹಂಚಿಕೆ ಸಂಬಂಧದ ವಿವಾದ ಈಗಾಗಲೇ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದ್ದು, ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.