ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ: ಶಾಸಕ ನೇಮರಾಜ್ ನಾಯ್ಕ

KannadaprabhaNewsNetwork |  
Published : Jun 26, 2026, 02:00 AM IST
ಹಗರಿಬೊಮ್ಮನಹಳ್ಳಿ ಪಟ್ಟಣದ ತೇರುಬೀದಿ ಬದಿಯ ಚರಂಡಿ ಸಹಿತ ಸಿಸಿ ರಸ್ತೆಗೆ ಶಾಸಕ ನೇಮರಾಜ್ ನಾಯ್ಕ ಗುರುವಾರ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹಗರಿಬೊಮ್ಮನಹಳ್ಳಿ ಪಟ್ಟಣದ ಕೆಚ್ಚಿನಬಂಡಿ ಗ್ರಾಮದ ಬಳಿ ಕೆಕೆಆರ್‌ಡಿಬಿಯ ₹೪ ಕೋಟಿ ಅನುದಾನದ ಮೇವಿನಕಣಿ ನಾಗತಿಬಸಾಪುರ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನೇಮರಾಜ ನಾಯ್ಕ ಭೂಮಿಪೂಜೆ ನೆರವೇರಿಸಿದರು.

ಹಗರಿಬೊಮ್ಮನಹಳ್ಳಿ: ಕಳೆದ ಎಂಟು ವರ್ಷದಿಂದ ಆಡಳಿತದ ನಡೆಸಿರುವ ಕಾಂಗ್ರೆಸ್‌ನಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ವಸತಿ ಸಹಿತ ಅನೇಕ ಅಭಿವೃದ್ಧಿ ಕಾಮಗಾರಿಗಳು ಕಾಗದದಲ್ಲಿ ಮಾತ್ರ ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಂದ ಗ್ಯಾರಂಟಿ ಯೋಜನೆಗಳ ಭಜನೆ ಮಾತ್ರ ನಿರಂತರವಾಗಿದೆ ಎಂದು ಶಾಸಕ ನೇಮರಾಜ್ ನಾಯ್ಕ ಲೇವಡಿ ಮಾಡಿದರು.

ಪಟ್ಟಣದ ಕೆಚ್ಚಿನಬಂಡಿ ಗ್ರಾಮದ ಬಳಿ ಕೆಕೆಆರ್‌ಡಿಬಿಯ ₹೪ ಕೋಟಿ ಅನುದಾನದ ಮೇವಿನಕಣಿ ನಾಗತಿಬಸಾಪುರ ರಸ್ತೆಯ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಯ ನಿಮಿತ್ತ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿ, ₹೯೦ ಕೋಟಿ ಅನುದಾನದಲ್ಲಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಎಂಬುದೇ ಹಸಿ ಸುಳ್ಳು. ಫಲಾನುಭವಿಗಳ ಪಟ್ಟಿ ದೋಷಪೂರ್ಣವಾಗಿದ್ದರೆ ಕಳೆದ ಮೂರು ವರ್ಷಗಳಿಂದ ಯೋಜನೆಯ ಅನುಷ್ಠಾನ ಸಮಿತಿ ಮತ್ತು ಜಿಲ್ಲಾ ಪ್ರಾಧಿಕಾರದ ಸದಸ್ಯರು ಏನು ಮಾಡುತ್ತಿದ್ದರು? ನಿರುದ್ಯೋಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಮಿತಿ ಮತ್ತು ಪ್ರಾಧಿಕಾರಗಳಲ್ಲಿ ನಾನಾ ಹುದ್ದೆ ಜತೆಗೆ ಸಂಬಳ ನೀಡಿರುವುದು ಯಾವ ಪುರುಷಾರ್ಥಕ್ಕೆ? ಎಲ್ಲಿಯಾದರೂ ಉಪ ಚುನಾವಣೆ ನಡೆದಾಗ ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವುದು ಹಾಸ್ಯಾಸ್ಪದ ಎಂದು ಹರಿಹಾಯ್ದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ೪,೬೫,೦೦೦ ಮನೆಗಳನ್ನು ನೀಡಲಾಗುತ್ತದೆ ಎಂಬ ಕಾಂಗ್ರೆಸ್ ಘೋಷಣೆ ಕಾಗದದಲ್ಲಿಯೇ ಉಳಿದಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಮನೆಗಳು ಎಲ್ಲಿ ಎಂದು ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಪ್ರತಿ ಮನೆ ನಿರ್ಮಾಣಕ್ಕಾಗಿ ಒದಗುವ ₹೨,೭೫,೦೦೦ ಹಣ ಯಾವ ನಿರ್ವಸಿತ ಫಲಾನುಭವಿ ಖಾತೆಗೆ ಜಮಾ ಮಾಡಲಾಗಿದೆ ಎಂದು ಪ್ರಶ್ನಿಸಿದರು.

ವಿದ್ಯುತ್ ವಿತರಣಾ ಜಾಲದ ಲೋಪಗಳನ್ನು ಪತ್ತೆ ಹಚ್ಚಲಾಗದ ಕಾಂಗ್ರೆಸ್ ಸರ್ಕಾರ, ವಿತರಣೆಯನ್ನು ಖಾಸಗಿಗೆ ಒಪ್ಪಿಸುವ ಹಿಂದೆ ರೈತರ ಹಾಗೂ ವಿದ್ಯುತ್ ಇಲಾಖೆಯ ಸಿಬ್ಬಂದಿ ವರ್ಗವನ್ನು ಬೀದಿಗೆ ತಳ್ಳುವ ಸಂಚು ನಡೆಸಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಶಾಸಕರು ಪಟ್ಟಣದ ರಾಮನಗರದ ತೇರುಬೀದಿಯ ಬದಿ ರಸ್ತೆಯಿಂದ ಗುರುಭವನದ ವರೆಗೂ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹೨ ಕೋಟಿ ಅನುದಾನದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ಟರು, ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಕಾರ್ಯದರ್ಶಿ ಡಿಶ್ ಪಾಂಡುರಂಗನಾಯ್ಕ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ಶಾಸಕರ ಆಪ್ತ ಸಹಾಯಕ ಬ್ಯಾಟಿ ನಾಗರಾಜ, ಬಿಜೆಪಿ ಮಂಡಲಾಧ್ಯಕ್ಷ ಬೆಣಕಲ್ ಪ್ರಕಾಶ, ಪುರಸಭೆ ಸದಸ್ಯ ನವೀನ್ ಕುಮಾರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಿ.ಎಚ್. ಸಿದ್ಧರಾಜು, ಸಂದೀಪ್ ಶಿವಮೊಗ್ಗ, ಗ್ರಾಪಂ ಮಾಜಿ ಸದಸ್ಯ ಕನಕಪ್ಪ, ಗ್ರಾಮದ ಮುಖಂಡರಾದ ಮಂಜುನಾಥ, ಎ. ಸಂತೋಷ್, ಪ್ರದೀಪಕುಮಾರ್, ತಿಪ್ಪಿಗುಂಡಿ ರಮೇಶ್, ಕೆಚ್ಚಿನಬಂಡಿ ದುರುಗಪ್ಪ, ಪಿಡಬ್ಲ್ಯೂಡಿ ಎಇಇ ಸತೀಶ್ ನಾಯ್ಕ, ಹೂವಿನಹಡಗಲಿಯ ಕೆಕೆಐಡಿಎಲ್ ಉಪ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಕರ ಪಾವತಿ ಒಟಿಎಸ್‌ಗೆ ಬೆಂಗಳೂರಿಗೆ ನಿಯೋಗ
ಅಂಧ, ಅನಾಥರ ಆಶ್ರಯದಾತ ಕಲ್ಲಯ್ಯಜ್ಜನವರಿಗೇ ಜೀವಬೆದರಿಕೆಗೆ ಭಾರೀ ಆಕ್ರೋಶ