ಕನ್ನಡಪ್ರಭ ವಾರ್ತೆ ಹಾಸನ
ಚನ್ನರಾಯಪಟ್ಟಣ ತಾಲೂಕು ಹೊನ್ನಶೆಟ್ಟಿಹಳ್ಳಿ ಗ್ರಾಮದ ವಿಶ್ವನಾಥ್ (೩೦) ಒಂದು ತಿಂಗಳಿನಿಂದ ಹಾಸನ ಸಂತೇಪೇಟೆಯಲ್ಲಿರುವ ಜಿಲ್ಲಾ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದರು. ವಿಶ್ವನಾಥ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಒಂದು ಪ್ರಕರಣದಲ್ಲಿ ಕುಖ್ಯಾತ ರೌಡಿಶೀಟರ್ ಯಾಚೇನಹಳ್ಳಿ ಚೇತುಗೆ ಆಶ್ರಯ ನೀಡಿದ ಆರೋಪವಿದ್ದು, ಮತ್ತೊಂದು ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ ತಮ್ಮ ಮಗನ ಹೆಸರು ಸೇರಿಸಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿಯಾಗಿದ್ದರಿಂದ ಅವರನ್ನು ಬಂಧಿಸಿ ಜಿಲ್ಲಾ ಉಪಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಭಾನುವಾರ ಜೈಲಿನಲ್ಲಿದ್ದ ವೇಳೆ ವಿಶ್ವನಾಥ್ ಅವರ ಆರೋಗ್ಯ ಹಠಾತ್ ಹದಗೆಟ್ಟಿದ್ದು, ವಾಂತಿ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸಿದ ತಕ್ಷಣ ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೇ, ಮರುದಿನ ಮಾಹಿತಿ ನೀಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಾಹಿತಿ ಪಡೆದ ತಕ್ಷಣ ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರು, ವಿಶ್ವನಾಥ್ ಜಿಲ್ಲಾಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಕಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಾವಿನ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿರುವ ಕುಟುಂಬಸ್ಥರು, ಜೈಲು ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾ ಉಪಕಾರಾಗೃಹದ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ.