ಕುಡಿದ ಮತ್ತಿನಲ್ಲಿ ಕತ್ತಿಯಿಂದ ಹಲ್ಲೆ

ಕನ್ನಡಪ್ರಭ ವಾರ್ತೆ ಕಳಸ

ಕುಡಿದ ಮತ್ತಿನಲ್ಲಿ ಮೂವರು ಕಾರ್ಮಿಕರ ನಡುವೆ ನಡೆದ ಜಗಳ ಒಬ್ಬರ ಸಾವಿನಲ್ಲಿ ಅಂತ್ಯವಾದ ಘಟನೆ ಗಾಳಿಗಂಡಿಯ ಹಾರ್ಮಕ್ಕಿ ಎಸ್ಟೇಟಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕಾರ್ಮಿಕ ಭೀಮಪ್ಪ(32)ಮೃತ ದುರ್ಧೈವಿ. ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಗ್ರಾಮದಿಂದ ಕಳಸದ ಗಾಳಿಗಂಡಿ ಹಾರ್ಮಕ್ಕಿ ಎಸ್ಟೇಟಿನಲ್ಲಿ ಕಳೆ ಹೊಡೆಯುವ ಯಂತ್ರ ಚಲಾಯಿಸಲು ಮೂವರು ಕಾರ್ಮಿಕರು 5 ದಿನದ ಹಿಂದೆಯಷ್ಟೇ ಬಂದಿದ್ದರು.

ಸೋಮವಾರ ರಾತ್ರಿ ಕುಡಿದ ಮತ್ತಿನಲ್ಲಿ ಸಂಬಂಧಿಗಳಾದ ಬಸವರಾಜಪ್ಪ (45) ಮತ್ತು ಭೀಮಪ್ಪ(32) ಅವರ ನಡುವೆ ಜಗಳ ನಡೆದಿದೆ. ಮದ್ಯದ ಮತ್ತಿನಲ್ಲಿ ಪರಸ್ಪರರು ಬ್ಲೇಡ್ ಮತ್ತು ಕತ್ತಿ ಬಳಸಿ ಹಲ್ಲೆ ನಡೆಸಿದ್ದರು. ಮತ್ತೊಬ್ಬ ಕಾರ್ಮಿಕ ಫಕೀರಪ್ಪ(40) ಮಧ್ಯಪ್ರವೇಶಿಸಿದಾಗ ಜಗಳ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಭೀಮಪ್ಪ ಇವರಿಬ್ಬರ ಮಾತು ಕೇಳದಿದ್ದಾಗ ಫಕೀರಪ್ಪ ಮತ್ತು ಬಸವರಾಜಪ್ಪ ಭೀಮಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಭೀಮಪ್ಪನ ತಲೆಯ ಹಿಂಭಾಗಕ್ಕೆ ಕತ್ತಿಯ ಏಟು ಬಿದ್ದಿದೆ. ಕುಡಿದ ಮತ್ತಿನಲ್ಲಿ ಅಲ್ಲೇ ಮಲಗಿದ ಭೀಮಪ್ಪನ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಆತ ಬೆಳಗ್ಗಿನ ವೇಳೆಗೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿ ಬಸವರಾಜಪ್ಪನಿಗೂ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಫಕೀರಪ್ಪನನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್, ಸರ್ಕಲ್ ಇನ್‌ಸ್‌ಪೆಕ್ಟ‌ರ್ ರಾಜಶೇಖರ್, ಕಳಸ ಠಾಣಾಧಿಕಾರಿ ಚಂದ್ರಶೇಖ‌ರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.