ಕನ್ನಡಪ್ರಭ ವಾರ್ತೆ ತರೀಕೆರೆ
ಬಾವಿಕೆರೆ ಗ್ರಾಮದಲ್ಲಿ ಕೆ.ಶಿ.ನಾ. ಕೃಷಿ ತೋಟಗಾರಿಕಾ ಮಹಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಗುಂಪು ಚರ್ಚೆಯಲ್ಲಿ ವಿದ್ಯಾರ್ಥಿ ದೀಕ್ಷಿತ್ ಶುದ್ಧ ಹಾಲು ಉತ್ಪಾದನೆ ಅಭ್ಯಾಸಗಳ ಬಗ್ಗೆ ಗ್ರಾಮದ ಡೈರಿಗೆ ಹಾಲು ಹಾಕಲು ಬಂದಿದ್ದ ಹೈನುಗಾರಿಕೆನಿರತ ರೈತರಿಗೆ ಮಾಹಿತಿ ನೀಡಿದರು.ಹಾಲು ಮನುಷ್ಯನ ದೇಹಕ್ಕೆ ತುಂಬಾ ಆರೋಗ್ಯಕರ ಆಹಾರವಾಗಿದ್ದು, ಎಲ್ಲಾ ತರಹದ ಪೌಷ್ಠಿಕಾಂಶ ಹಾಗೂ ಖನಿಜಾಂಶಗಳಿಂದ ಕೂಡಿದೆ. ಆದ್ದರಿಂದ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡುವುದು ತುಂಬಾ ಅಗತ್ಯ. ಶುದ್ಧ ಹಾಲು ಬಹಳ ಹೊತ್ತಿನವರೆಗೂ ತನ್ನ ಗುಣಮಟ್ಟ ಕಾಯ್ದುಕೊಳ್ಳುತ್ತದೆ ಹಾಗೂ ಶುದ್ಧ ಹಾಲು ಉತ್ತಮ ಸಂಸ್ಕರಣೆ ಗುಣಗಳನ್ನು ಹೊಂದಿರುತ್ತದೆ. ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಶುದ್ಧ ಹಾಲು ಉತ್ಪಾದನೆಯಲ್ಲಿ ಬರುವ ವಿವಿಧ ಅಡಚಣೆಗಳನ್ನು ತಿಳಿಸಿ, ಕೊಟ್ಟಿಗೆ ನಿರ್ವಹಣೆ, ಹಸು/ಎಮ್ಮೆಗಳ ನಿರ್ವಹಣೆ, ಡೈರಿ ಪಾತ್ರೆಗಳ ಮತ್ತು ಕೆಚ್ಚಲಿನ ಸ್ವಚ್ಛತೆ ಬಗ್ಗೆ ತಿಳಿಸಿದರು.
ಪ್ರತಿದಿನ ಹಸು / ಎಮ್ಮೆಗಳನ್ನು ಬ್ರಷ್ ಅಥವಾ ತೆಂಗಿನ ನಾರಿನಿಂದ ಉಜ್ಜಿ ಸ್ನಾನ ಮಾಡಿಸಬೇಕು. ಕೊಟ್ಟಿಗೆಯಿಂದ ಸಗಣಿ ವಿಲೇವಾರಿ ಅಚ್ಚುಕಟ್ಟಾಗಿ ಮಾಡಬೇಕು, ಹಾಲು ಕರೆಯುವ ಸಂದರ್ಭದಲ್ಲಿ ಕೆಚ್ಚಲಿನ ಭಾಗವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ ನಂತರ ಹಾಲು ಕರೆಯಲು ಮುಂದಾಗಬೇಕು. ಹಾಲು ಕರೆಯುವಾಗ ಕೈಗಳು ಒಣಗಿರಬೇಕು. ಪೂರ್ಣ ಕೈಯಿಂದ ಹಾಲು ಕರೆಯಬೇಕು ಹಾಗೂ ಹಾಲು ಕರೆಯುವ ರೀತಿ ಮೃದುವಾಗಿ ಮತ್ತು ವೇಗವಾಗಿರಬೇಕು ಎಂಬ ಮಾಹಿತಿ ಗಳನ್ನು ನೀಡಿ ಹಾಲು ಉತ್ಪಾದನೆಯಲ್ಲಿ ನಮ್ಮ ದೇಶ ಮತ್ತು ರಾಜ್ಯದ ಅಂಕಿ ಅಂಶಗಳ ಮಾಹಿತಿ ನೀಡಿದರು.ಗುಂಪು ಚರ್ಚೆಯಲ್ಲಿ ಹಾಲಿನ ಡೈರಿ ಸದಸ್ಯರು, ಹಾಲು ಉತ್ಪಾದಕರು ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವದ ವಿದ್ಯಾರ್ಥಿಗಳಾದ ಆದಿತ್ಯ, ಶರತ್ ಕುಮಾರ್, ಶರತ್ ಮಾಳಗಿ, ರಾಜೇಂದರ್, ವಿಶ್ವನಾಥ್ ಗೌಡ ಉಪಸ್ಥಿತರಿದ್ದರು.