ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಸುತ್ತೂರು ಮಠ: ಡಾ. ಸುಧಾಮೂರ್ತಿ

KannadaprabhaNewsNetwork |  
Published : Jan 14, 2024, 01:34 AM ISTUpdated : Jan 14, 2024, 03:50 PM IST
50 | Kannada Prabha

ಸಾರಾಂಶ

ಸಹಸ್ರಾರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸುತ್ತೂರು ಶ್ರೀಮಠವು ಸದೃಢ ದೇಶ ಕಟ್ಟುವ ಕಾಯಕ ಮಾಡುತ್ತಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸುಧಾಮೂರ್ತಿ ಅಭಿಪ್ರಾಯಪಟ್ಟರು. ಅವಶ್ಯಕ

ಕನ್ನಡಪ್ರಭ ವಾರ್ತೆ ಸುತ್ತೂರು

ಸಹಸ್ರಾರು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸುತ್ತೂರು ಶ್ರೀಮಠವು ಸದೃಢ ದೇಶ ಕಟ್ಟುವ ಕಾಯಕ ಮಾಡುತ್ತಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸುಧಾಮೂರ್ತಿ ಅಭಿಪ್ರಾಯಪಟ್ಟರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸುತ್ತೂರು ವಸತಿ ಶಾಲೆಯ ಸಹಸ್ರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜೀವನದಲ್ಲಿ ಗುರುವಿನ ಮಾರ್ಗದರ್ಶನ ತುಂಬಾ ಅವಶ್ಯಕ. ಆದ್ದರಿಂದಲೇ ಗುರುವನ್ನು ಆಚಾರ್ಯ ದೇವೋಭವ ಎಂದು ದೇವರಿಗೆ ಹೋಲಿಸುತ್ತಾರೆ. ಶ್ರೀಕ್ಷೇತ್ರದ ಪುಣ್ಯ ಭೂಮಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳನ್ನು ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಬೆಳೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. 

ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ಗುರುಗಳನ್ನು ಮರೆಯದೆ ಸ್ಮರಿಸಿಕೊಳ್ಳಬೇಕು. ಅವಶ್ಯಕತೆ ಇರುವವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕು, ಇಂತಹ ಮಾನವೀಯ ಮೌಲ್ಯಗಳನ್ನೆ ಶರಣರ ವಚನಗಳಲ್ಲೂ ಕಾಣಬಹುದು. 

ಬಿಡುವಿನ ಸಮಯದಲ್ಲಿ ವಚನಗಳನ್ನು ಅಭ್ಯಾಸ ಮಾಡುವ ಮೂಲಕ ನಮ್ಮ ಜೀವನದಲ್ಲೂ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕ್ಷೇತ್ರ ಭೇಟಿಗಾಗಿ ಆಗಮಿಸಿದ್ದ ಅನಿವಾಸಿ ಭಾರತೀಯರಾದ ಡಾ. ಪೂರ್ಣಿಮಾ ಮದಿವನ್ನನ್ ಮಾತನಾಡಿ, ಶ್ರೀ ಕ್ಷೇತ್ರದ ಭಕ್ತಿ, ಶಿಸ್ತು ನೋಡಿ ನನ್ನ ಆಯಾಸವೆಲ್ಲ ದೂರವಾಯಿತು.

ನಿಮ್ಮನ್ನೆಲ್ಲಾ ನೋಡಿ ನನ್ನ ಉತ್ಸಾಹ ಇಮ್ಮಡಿಯಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆತ್ತವರು ಎಷ್ಟೊಂದು ಕಷ್ಟಪಡುತ್ತಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ನಮ್ಮ ಪೂರ್ವಿಕರು ನಮಗಾಗಿ ಕಷ್ಟಪಡುವುದರಿಂದ ಅವರನ್ನು ಸದಾ ಸ್ಮರಿಸಿಕೊಳ್ಳಬೇಕು. 

ವಿದ್ಯಾರ್ಥಿಗಳು ಆರೋಗ್ಯ, ಸ್ವಚ್ಛ ಮನಸ್ಸು ಮತ್ತು ಹೃದಯ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಮ್ಮ ಸಾಧನೆಯ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಬಂಡೀಪುರದ ಬುಡಕಟ್ಟು ಮಹಿಳೆ ರತ್ನಮ್ಮ ಅವರು, ಹುಟ್ಟು ಅಂಧರಾಗಿದ್ದ ತಂದೆ, ಸಂಕಷ್ಟಗಳ ನಡುವೆ ನಮ್ಮನ್ನು ಸಾಕಲು ನಮ್ಮ ತಾಯಿ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. 

ಬಾಲ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಸಿಗುವ ನೆಲ್ಲಿಕಾಯಿ ಸಂಗ್ರಹಿಸಿ ಅವುಗಳನ್ನು ಮಾರಾಟ ಮಾಡಿ ಜೀವನ ಮಾಡಿದೆ. ಶಾಲೆಗೆ ನಾನು ಹೋಗುತ್ತಿದ್ದುದು ವಿದ್ಯೆಗಿಂತ ಹೆಚ್ಚಾಗಿ ನನ್ನ ಹಸಿವಿಗೆ ಆಶ್ರಮ ಶಾಲೆಯಲ್ಲಿ ಕೊಡುತ್ತಿದ್ದ ಗಂಜಿ ಮತ್ತು ಊಟಕ್ಕಾಗಿ ಹೋಗುತ್ತಿದ್ದೆ ಎಂದು ಸ್ಮರಿಸಿಕೊಂಡ ಅವರು, ವಿದ್ಯಾರ್ಥಿಗಳು ಸಿಗುವ ಅವಕಾಶಗಳನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ