ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ
ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ನಡೆದ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, ಸುತ್ತೂರು ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ೧೯೬೨ರಿಂದಲೂ ಅವಿನಾಭಾವ ಸಂಬಂಧವಿದೆ. ಈಗಿರುವ ಪೂಜ್ಯರ ಜತೆಗೆ ಹಿಂದಿನ ಪೂಜ್ಯರ ದಿವ್ಯಾಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಅದಕ್ಕಾಗಿಯೇ ನಮ್ಮ ತಂದೆಯವರು ಸುತ್ತೂರು ಕ್ಷೇತ್ರವನ್ನು ಯಾವತ್ತೂ ಮರೆಬಾರದು ಎಂದು ನನಗೆ ನೂರಾರು ಬಾರಿ ಹೇಳಿದ್ದಾರೆ. ಈ ಮಾತನ್ನು ನನ್ನ ಹೃದಯದಿಂದ ಹೇಳುತ್ತಿದ್ದೇನೆ ಎಂದು ನುಡಿದರು.
ಸುತ್ತೂರು ಕ್ಷೇತ್ರವು ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡಮಕ್ಕಳಿಗೆ ಬೆಳಕಾಗಿದೆ. ಇವತ್ತು ಶ್ರೀಮಠವು ರಾಜ್ಯ, ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಅಗಾಧವಾಗಿ ಬೆಳೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾಗಿ ಸೇವೆ ಮಾಡುತ್ತಿದೆ. ಈಗಿರುವ ಪೂಜ್ಯರು ಮಠದ ಪರಂಪರೆಯನ್ನು ಮುಂದುವರೆಸುತ್ತಾ ನಾಡಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.ಕೆಲ ತಿಂಗಳ ಹಿಂದೆ ಸುತ್ತೂರು ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ನಾನು ಭಾಗಿಯಾಗಿದ್ದೆ. ಆ ಸಮಯದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಲ್ಲಿ ಮನವಿ ಮಾಡಿ ಈ ಬಾರಿ ಮಳವಳ್ಳಿಯಲ್ಲೇ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ನೆರೆವೇರಿಸಲು ಅನುಮತಿ ನೀಡಬೇಕು ಎಂದು ವಿನಂತಿಸಿದ್ದೆ. ಅದಕ್ಕೆ ಪೂಜ್ಯರು ಒಪ್ಪಿಗೆ ನೀಡಿದ್ದರು. ಆ ನಂತರ ಪೂಜ್ಯರು ಮತ್ತು ನಾನು ಸೇರಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ನಮ್ಮ ಆಹ್ವಾನವನ್ನು ಒಪ್ಪಿ ಇಂದು ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಆಭಾರಿ ಆಗಿದ್ದೇನೆ ಎಂದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೇದಿಕೆ ಮೇಲೆ ಭಾಷಣ ಮಾಡುವಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ‘ನಿಮಗೆ ಭಗವಂತ ಒಳ್ಳೆಯದನ್ನು ಉಂಟು ಮಾಡಿ ಉತ್ತಮ ಆರೋಗ್ಯವನ್ನು ನೀಡಲಿ’ ಎಂದು ಹಾರೈಸಿದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವರು ರಾಷ್ಟ್ರಪತಿಗಳಿಗೆ ಧನ್ಯವಾದ ಅರ್ಪಿಸಿದರು. ಹಾಗೇ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಕೂಡ ಸಚಿವರಿಗೆ ಜನ್ಮದಿನ ಶುಭ ಕೋರಿದರು. ಸುತ್ತೂರು ಕ್ಷೇತ್ರದ ಪೀಠಾಧಿಪತಿ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರೂ ಸಹ ತಮ್ಮ ಭಾಷಣದಲ್ಲಿ ಸಚಿವರಿಗೆ ಹುಟ್ಟುಹಬ್ಬದ ಶುಭ ಕೋರಿ ಆಶೀರ್ವದಿಸಿದರು.