ಕನ್ನಡಪ್ರಭ ವಾರ್ತೆ ಮೈಸೂರು
ಸಜ್ಜನ ರಾಜಕಾಣಿಗಳೆಂದೇ ಹೆಸರಾಗಿದ್ದರವರು. ದಾವಣಗೆರೆ ಜಿಲ್ಲೆ ಶಾಮನೂರು ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಬಿಎಸ್ಸಿ ಪದವೀಧರರು. ಅಕ್ಕಿಯ ವ್ಯಾಪಾರೋದ್ಯಮವನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ವಿಯಾಗಿದ್ದರು. ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿ, ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1994 ರಲ್ಲಿ ಮೊದಲ ಬಾರಿಗೆ ದಾವಣಗೆರೆಯಿಂದ ವಿಧಾನಸಭೆಗೆ ಆಯ್ಕೆಯಾದರು. ಅನಂತರ ಸತತವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾದುದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. 1998 ರಲ್ಲಿ ಲೋಕಸಭೆಗೂ ಆಯ್ಕೆಯಾಗಿದ್ದರು.ಕಾಂಗ್ರೆಸ್ ಪಕ್ಷದಲ್ಲಿ ಐದು ದಶಕಗಳಿಂದ ರಾಜಕಾರಣದಲ್ಲಿದ್ದವರು. ದೇಶದ ಅತ್ಯಂತ ಹಿರಿಯ ಸಕ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾಗಿ ಇಳಿ ವಯಸ್ಸಿನಲ್ಲೂ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು.
ದೈವಭಕ್ತರು, ಅಧ್ಯಾತ್ಮಜೀವಿಗಳೂ ಆಗಿದ್ದರು. ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ಸುತ್ತೂರು ಮಠದೊಂದಿಗೆ ಅತ್ಯಂತ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಜಾತ್ರೆ, ಜಯಂತಿ, ಶ್ರೀಮಠದ ಹಾಗೂ ಸಂಸ್ಥೆಗಳ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಶ್ರೀಮಠಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಅತಿಥಿಗೃಹವನ್ನು ನಿರ್ಮಿಸಿದ ಕೊಡುಗೈ ದಾನಿಗಳು.
ಅವರ ಅಗಲುವಿಕೆಯಿಂದ ಕರ್ನಾಟಕದ ಹಿರಿಯಚೇತನವೊಂದು ಅಸ್ತಂಗತವಾದಂತಾಗಿದೆ. ದಿವಂಗತರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬ ವರ್ಗದವರರು, ಬಂಧು ಬಾಂಧವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಈ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಶ್ರೀಗಳು ಹಾರೈಸಿದ್ದಾರೆ.