ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆದ ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸಂದರ್ಭದಲ್ಲಿ, ಪುತ್ತಿಗೆ ಶ್ರೀಗಳ ಸಂನ್ಯಾಸದ ಸುವರ್ಣ ವರ್ಷಾಚರಣೆಯ ನೆನಪಿನಲ್ಲಿ ಕೃಷ್ಣಮಠದಲ್ಲಿ ಚಿನ್ನದಿಂದ ಹೊದಿಸಲಾಗಿರುವ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದರು.
ಬೆಳಿಗ್ಗೆ 11.40ರ ಸುಮಾರಿಗೆ ಕೃಷ್ಣಮಠದ ರಥಬೀದಿಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಮಠದ ಸಂಪ್ರದಾಯದಂತೆ ಮಂಗಳ ವೇದಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಅಲ್ಲಿಂದ ಮೋದಿ ಅವರು ರಥಬೀದಿಯಲ್ಲಿರುವ ಭಕ್ತ ಕನಕದಾಸನ ಗುಡಿಗೆ ತೆರಳಿ ಕನಕನವಿಗ್ರಹಕ್ಕೆ ತುಳಸಿಮಾಲೆ ಅರ್ಪಿಸಿ ಕೈಮುಗಿದು ನಮಿಸಿದರು.ನಂತರ ಅವರನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಗೌರವದಿಂದ ಬರ ಮಾಡಿಕೊಂಡರು.ನಂತರ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೊಡುಗೆಯಾಗಿ ಕನಕನ ಕಿಂಡಿಗೆ ಹೊದಿಸಿದ ಚಿನ್ನದ ಕವಚವನ್ನು ಮೋದಿ ಪುಷ್ಪಾರ್ಚನೆಯೊಂದಿಗೆ ಉದ್ಘಾಟಿಸಿದರು.ಅಲ್ಲಿಂದ ಮೋದಿ ಅವರನ್ನು ಕೃಷ್ಣಮಠಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಮೋದಿ ಅವರಿಗೆ ಪರ್ಯಾಯ ಶ್ರೀಗಳು ಮಾಲಾರ್ಪಣೆ ಮಾಡಿದರು.
ಮಠದಲ್ಲಿ ಪ್ರದಕ್ಷಿಣೆಗೈದ ಮೋದಿ ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣನನ್ನು ವೀಕ್ಷಿಸಿ ನಮಸ್ಕರಿಸಿದರು, ನಂತರ ಮುಖ್ಯಪ್ರಾಣ ದೇವರ ದರ್ಶನ ಪಡೆದರು.ಕೃಷ್ಣನ ಮುಂಭಾಗದ ನೂತನ ಸುವರ್ಣ ತೀರ್ಥ ಮಂಟಪದಲ್ಲಿ ಭಗವದ್ಗೀತೆಗೆ ಪುಷ್ಪನಮನ ಸಲ್ಲಿಸಿ, ಕೃಷ್ಣಾರ್ಪಣ ಮೂಲಕ ಮಂಟಪವನ್ನು ಕೃಷ್ಣನಿಗೆ ಅರ್ಪಿಸಿದರು.ನಂತರ ಪುತ್ತಿಗೆ ಶ್ರೀಗಳು ಪ್ರಧಾನಿಗೆ ಕೃಷ್ಣನ ಪ್ರಸಾದ ಸಮರ್ಪಿಸಿದರು, ಈ ಸಂದರ್ಭದಲ್ಲಿ ಶ್ರೀಗಳು ಮೋದಿಗೆ ಲೋಹದ ಮುದ್ರೆಗಳನ್ನು ನೀಡಿದ್ದು ವಿಶೇಷವಾಗಿತ್ತು.ಇದಾದ ಬಳಿಕ ಮೋದಿ ಚಂದ್ರಶಾಲೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಶಿರೂರು ಶ್ರೀ ವೇದವರ್ಧನ ತೀರ್ಥರನ್ನು ಭೇಟಿಯಾದರು.ಗೀತಾಮಂದಿರಕ್ಕೆ ತೆರಳಿ, ಗೋಡೆಯ ಮೇಲೆ ಗೀತೆಯ ಕೆತ್ತನೆ, ಹಸ್ತಪ್ರತಿಗಳ ಸಂಗ್ರಹ ವೀಕ್ಷಿಸಿ, ಅಲ್ಲಿಂದ ಲಕ್ಷ ಕಂಠ ಗೀತಾ ಪಾರಾಯಣ ವೇದಿಕೆಗೆ ಆಗಮಿಸಿದರು.