ಕನ್ನಡಪ್ರಭ ವಾರ್ತೆ ಹಾಸನ
ತಪ್ಪು ಮಾಡುವುದು ಸಹಜ. ಆದರೆ ತಪ್ಪು ಎಂದು ತಿಳಿದಿದ್ದರೂ ಮತ್ತೆ ಮತ್ತೆ ಅದೆ ತಪ್ಪು ಮಾಡಿ ಎಡುವುವುದು ಮಹಾತಪ್ಪು. ಆಗಾಗ್ಗೆ ಗುರುವನ್ನು ನೆನಪಿಸಿಕೊಂಡರೇ ಜೀವನ ಮೌಲ್ಯವನ್ನು ನೆನಪಿಸುತ್ತದೆ. ಈ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ, ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.ನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಗುರುವಾರ “ಸುವರ್ಣ ಸಂಪೂರ್ತಿ ಸಂಭ್ರಮ " ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಮ್ಮೊಳಗೆ ದೋಷಗಳ ಕಳೆದುಕೊಂಡಾಗ ಅನ್ಯ ಪುರುಷ ನಮ್ಮೊಳಗೆ ಸಿಗುತ್ತಾ ಹೋಗುತ್ತಾನೆ. ಎಲ್ಲಾ ಪ್ರಕಾಶನ, ಪ್ರಗತಿ, ವಿಕಾಸನ ಹಾಗೂ ಪರಿವರ್ತನೆ ಇದೆಯೋ ಅಲ್ಲಿ ನಿತ್ಯವೂ ಕುಡ ಬದಲಾಗುತ್ತಲೇ ಹೋಗುತ್ತದೆ. ಗುರುವನ್ನು ಅರಿಯಬೇಕಾದರೆ ನಿತ್ಯವು ಕೂಡ ನಮ್ಮ ಅಂತರಂಗದ ಕಣ್ಣು ಶುದ್ಧವಾಗುತ್ತ ಹೋಗಬೇಕು. ಒಂದು ವೇಳೆ ಅಂತರಂಗದ ಕಣ್ಣು ನಮ್ಮಲ್ಲಿ ಶುದ್ಧವಾಗದೆ ಹೋದರೇ ಶುದ್ಧಿಗೊಂಡಂತ ಜ್ಞಾನಿಯನ್ನು ಕರೆಯಿಸಿ ನಮ್ಮ ಅಂಧಕಾರದ ಕಣ್ಣನ್ನು ಹೋಗಲಾಡಿಸಿ ಜ್ಞಾನದ ಕಣ್ಣನ್ನು ತೆರೆದುಕೊಳ್ಳಬೇಕು ಎಂದು ಬೋಧಿಸಿದರು. ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಗುರುಗಳು ನುಡಿದ ಆಶೀರ್ವಚನವನ್ನು ಎಷ್ಟೆ ಬಣ್ಣಿಸಿದರೂ ಸಾಲದು. ನಾವು ಕೂಡ ಗುರುಗಳ ತತ್ವ ಸಿದ್ಧಾಂತದಲ್ಲಿ ನಡೆದರೇ ಉತ್ತಮ ವಾತಾವರಣ ನಿರ್ಮಿಸಬಹುದು. ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಮಹೋತ್ಸವದ ಸವಿನೆನಪಿಗಾಗಿ ತುಲಾಭಾರ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮವಾಗಿದೆ ಎಂದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಪ್ರಸ್ತುತದಲ್ಲಿ ಶ್ರೀ ಆದಿಚುಂಚನಗಿರಿ ಮಠದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದಲ್ಲದೇ ಅನ್ನದಾಸೋಹಕ್ಕೆ ಹೆಚ್ಚಿನ ಆಸಕ್ತಿ ವಹಿಸಿದೆ. ನಮ್ಮ ಸಂಸ್ಕೃತಿ ಉಳಿಸುವಲ್ಲಿ ಮಠದ ಪಾತ್ರ ಹೆಚ್ಚು ಇದೆ ಎಂದರು. ಕಾರ್ಯಕ್ರಮದಲ್ಲಿ ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ತಮಿಳುನಾಡು ಕುಪ್ಪಂ ಕ್ಷೇತ್ರದ ಶಾಸಕ ರಾಮಕೃಷ್ಣ, ಮಾಜಿ ಶಾಸಕ ಎ.ಟಿ ರಾಮಸ್ವಾಮಿ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಘು, ಎಚ್.ಪಿ. ಮೋಹನ್, ಹಲವು ಸ್ವಾಮೀಜಿಗಳು ಇದ್ದರು.