ನ.16ರಂದು ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿ
ಕನ್ನಡಪ್ರಭ ವಾರ್ತೆ ಬೆಂಗಳೂರು
ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ಕೊಡಮಾಡುವ 2025ನೇ ಸಾಲಿನ ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮತ್ತು ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿಗೆ ಗದಗ ಜಿಲ್ಲೆಯ ರೋಣ ತಾಲೂಕಿ ಕೊತಬಾಳ ಗ್ರಾಮದ ಜೋಗತಿ ನೃತ್ಯ ಕಲಾವಿದ ರಾಚಯ್ಯ ವೀರಭದ್ರಯ್ಯ ಮುಧೋಳ ಅವರು ಆಯ್ಕೆಯಾಗಿದ್ದಾರೆ.ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಯು 50 ಸಾವಿರ ರು.ನಗದು, ಕಂಚಿನ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ನ.17ರಂದು ಬೆಳಗ್ಗೆ 11ಕ್ಕೆ ಶ್ರೀಮಠದ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯುವ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ, ಶ್ರೀ ಜಗದ್ಗುರು ರೇಣುಕಾದಿಪಂಚಾಚಾರ್ಯ ಯುಗಮಾನೋತ್ಸವ, ಶ್ರೀ ಬಸವಾದಿ ಶಿವಶರಣರ ಮತ್ತು ಸುವರ್ಣಲಿಂಗ ಶಿವಾಚಾರ್ಯ ಸ್ವಾಮೀಜಿಗಳ 24ನೇ ಸಂಸ್ಮರಣೋತ್ಸವ ಪ್ರಯುಕ್ತ ನಡೆಯುವ ಸಮಾರಂಭದಲ್ಲಿ ಸುವರ್ಣ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನೊಣವಿನಕೆರೆಯ ಡಾ.ಕರಿವೃಷಭದೇಶಿಕೇಂದ್ರ ಶಿವಮೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸುವರು. ಮಠದ ಪಟ್ಟಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.