ಕನ್ನಡಪ್ರಭವಾರ್ತೆ ಚಳ್ಳಕೆರೆ
14 ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸ್ವಚ್ಛತಾ ಆಂದೋಲನವನ್ನು ಆರಂಭಿಸಿದ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅ.2ರಂದು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಸ್ವಚ್ಛತಾ ಅಂದೋಲನ ಆರಂಭಿಸಿದ್ದು, ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಗೆ ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ, ಚುನಾಯಿತ ಸದಸ್ಯರು, ನಾಮಿನಿ ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದು ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ತಿಳಿಸಿದರು.ಅವರು, ಶನಿವಾರ ನಗರಸಭೆ ಮುಂಭಾಗದಲ್ಲಿ ನಗರ ಸ್ವಚ್ಛತಾ ಇ-ಸೇವೆ ಜಾಗೃತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಳೆದ ಹಲವಾರು ದಶಕಗಳಿಂದ ನಗರಸಭೆ ಸಿಬ್ಬಂದಿಯ ಸಹಕಾರದಿಂದ ಸ್ವಚ್ಛತೆಯಲ್ಲಿ ತೊಡಗಿದ್ದು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರೂ ಸಹ ನಗರಸಭೆಯ ಸ್ವಚ್ಛತೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ನಗರಸಭೆ ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾರ್ಮಿಕರು ಸ್ವಚ್ಛತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರದೆ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ನೈರ್ಮಲ್ಯ ಇಂಜಿನಿಯರ್ ಕೆ.ಬಿ. ನರೇಂದ್ರಬಾಬು, ಸ್ವಚ್ಛತಾ ಈ-ಸೇವೆ ಮೂಲಕ ಹಸಿ, ಒಣ ಕಸವನ್ನು ಬೇರ್ಪಡೆ ಮಾಡಿ ಸಂಗ್ರಹಿಸಿ ಪ್ರತಿನಿತ್ಯ ವಾರ್ಡ್ಗಳಿಗೆ ಬರುವ ನಗರಸಭೆ ವಾಹನಕ್ಕೆ ನೀಡಬೇಕು. ಮನೆಯಲ್ಲೇ ಕಸವನ್ನು ವಿಂಗಡಣೆ ಮಾಡುವುದರಿಂದ ಪೌರಕಾರ್ಮಿಕರಿಗೆ ಹಸಿ, ಒಣಕಸವನ್ನು ಬೇರೆಬೇರೆಯಾಗಿ ಸಾಗಾಟ ಮಾಡಲು ಅನುಕೂಲವಾಗುತ್ತದೆ ಎಂದರು.
ಇದರಿಂದ ನೈರ್ಮಲ್ಯ ರಕ್ಷಣೆಯ ಜತೆಗೆ ಪರಿಸರ ಜಾಗೃತಿಯನ್ನು ಮೂಡಿಸಿದಂತಾಗುತ್ತದೆ. ಸ್ವಚ್ಚತಾ ಅಂದೋಲನದ ಮೂಲಕ ನಗರವನ್ನು ಸ್ವಚ್ಛವಾಗಿರಿಸಿ ನಾಗರೀಕರಿಗೆ ಉತ್ತಮ ಆರೋಗ್ಯ ಕಲ್ಪಿಸುವ ಗುರಿಯಾಗಿದೆ. ಇದಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಯುಕ್ತರು ಮತ್ತು ಸಿಬ್ಬಂದಿ ವರ್ಗ ನಗರದ ಪ್ರತಿವಾರ್ಡ್ನಲ್ಲೂ ಸ್ವಚ್ಛತಾ ಇ-ಸೇವೆಯ ಬಗ್ಗೆ ಸಾರ್ವಜನಿಕರಿಗೆ ವಿಶೇಷ ಜಾಗೃತಿಯನ್ನು ಮೂಡಿಸಬೇಕು ಎಂದು ಮನವಿ ಮಾಡಿದರು.ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಓ. ಸುಜಾತ, ಸದಸ್ಯರಾದ ಕೆ. ವೀರಭದ್ರಪ್ಪ, ಶಿವಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ. ವಿನಯ್, ಸಹಾಯಕ ಇಂಜಿನಿಯರ್ ಕೆ. ಲೋಕೇಶ್, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ಸತೀಶ್, ಸಮುದಾಯ ಅಧಿಕಾರಿ ಭೂತಣ್ಣ, ಪ್ರೋಗ್ರಾಂ ಅಧಿಕಾರಿ ಸಂದೀಪ್, ಹರೀಶ್, ಓಬಳೇಶ್, ಚೇತನ್, ನಾಗರಾಜು, ರಾಜೇಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ಗಣೇಶ್, ಸುನೀಲ್, ಗೀತಾಕುಮಾರಿ, ರುದ್ರಮುನಿ, ಎಚ್. ತಿಪ್ಪೇಸ್ವಾಮಿ, ವಿಶ್ವನಾಥ, ಎಸ್.ಎಲ್. ಮಂಜಣ್ಣ, ಗುರುಪ್ರಸಾದ್, ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.