ಸ್ವಾಮಿ ವಿವೇಕಾನಂದರು ಯುವ ಜನರಿಗೆ ಆದರ್ಶಪ್ರಾಯ: ಪೂರ್ಣೇಶ್‌

KannadaprabhaNewsNetwork |  
Published : Jan 17, 2025 12:48 AM IST
ನರಸಿಂಹರಾಜಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯವರು  ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ  ರಾಷ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್, ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್ ಗೌಡ ಮತ್ತಿತರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಏಳು, ಎದ್ದೇಳು, ಗುರಿ ಮುಟ್ಟುವವರಿಗೆ ನಿಲ್ಲದಿರು ಎಂದು ಯುವಕರಿಗೆ ಕರೆ ಕೊಟ್ಟ ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್‌ ತಿಳಿಸಿದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟೀಯ ಯುವ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಏಳು, ಎದ್ದೇಳು, ಗುರಿ ಮುಟ್ಟುವವರಿಗೆ ನಿಲ್ಲದಿರು ಎಂದು ಯುವಕರಿಗೆ ಕರೆ ಕೊಟ್ಟ ಸ್ವಾಮಿ ವಿವೇಕಾನಂದರು ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್‌ ತಿಳಿಸಿದರು.

ಬುಧವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟೀಯ ಯುವ ದಿನಾಚರಣೆಯಲ್ಲಿ ಯುವಜನರ ಚಿತ್ತ, ಉತ್ತಮ ವ್ಯಕ್ತಿತ್ವದತ್ತ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಯುವ ಜನರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದಬೇಕು. ಅವರು ಜೀವನದಲ್ಲಿ ನಡೆದು ಬಂದ ದಾರಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರ ಹೃದಯದಲ್ಲೂ ಪ್ರಾಮಾಣಿಕತೆ ಇರಬೇಕು. ಜೇಸಿ ಸಂಸ್ಥೆ ಯುವಕರಲ್ಲಿ ವ್ಯಕ್ತಿತ್ವ ರೂಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಜೇಸಿ ಸಂಸ್ಥೆಗೂ, ವಿವೇಕಾನಂದ ಸ್ವಾಮಿಗೂ ಅವಿನಾವಭಾವ ಸಂಬಂಧವಿದೆ. ಯುವಕರಿಗಾಗಿ ಸ್ಥಾಪನೆಗೊಂಡ ಏಕೈಕ ಸಂಸ್ಥೆ ಎಂದರೆ ಅದು ಜೇಸಿ ಸಂಸ್ಥೆ ಎಂದರು.

ಜೇಸಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಮನು ಮಾತನಾಡಿ,ಜೇಸಿ ಸಂಸ್ಥೆ ಯುವಕರಿಗಾಗಿ ಇರುವ ಸಂಸ್ಥೆಯಾಗಿದೆ. ಕಳೆದ ಬಾರಿಯೂ ಯುವಕರಿಗಾಗಿ ಜೇಸಿ ಸಂಸ್ಥೆ ಹಲವಾರು ಕಾರ್ಯಕ್ರಮ ರೂಪಿಸಿತ್ತು. ಯುವಜನರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಸುಭದ್ರ ದೇಶ ಕಟ್ಟಬಹುದು. ಜೇಸಿ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟೀಯ ಯುವ ದಿನಾಚರಣೆ ಹಮ್ಮಿಕೊಂಡಿರುವುದು ಸಕಾಲಿಕವಾಗಿದೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಸಾರ್ಥಕ್ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಸಾರ್ಥಕತೆಯಲ್ಲಿ ಜೇಸಿ ಎಂಬ ಸ್ಲೋಗನ್ ಅಡಿ ಕೆಲಸ ಮಾಡುತ್ತೇವೆ. ಎಲ್ಲಾ ಸದಸ್ಯರನ್ನು ತಂಡವಾಗಿ ಒಗ್ಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡುತ್ತೇವೆ. ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜೇಸಿ ಸಂಸ್ಥೆಗೆ ನೂತನವಾಗಿ ಸೇರ್ಪಡೆಗೊಂಡ ಅಗ್ನಿಶಾಮಕ ದಳದ ನವೀನ್ ಹಾಗೂ ಇತರ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು. ಸಭೆಯಲ್ಲಿ ಜೇಸಿ 14 ರ ಪೂರ್ವ ವಲಯ ಉಪಾಧ್ಯಕ್ಷ ಚರಣರಾಜ್‌, ಜೇಸಿ ಕಾರ್ಯದರ್ಶಿ ಮಿಥುನ್‌ ಗೌಡ, ಜೇಸಿ ಪೂರ್ವಾಧ್ಯಕ್ಷ ಸಾದತ್‌ ಸಮೀರ್‌, ಉಪಾಧ್ಯಕ್ಷ ವಿನೂತ್, ಕಾರ್ಯಕ್ರಮ ನಿರ್ದೇಶಕ ರಾದ ರಜಿತ್‌, ಅಪೂರ್ವ ರಾಘವೇಂದ್ರ, ಆದರ್ಶ, ಪುರುಶೋತ್ತಮ್‌ , ಮಿಥುನ್ ಗೌಡ ಮತ್ತಿತರರು ಇದ್ದರು.

PREV