- ಜಿಲ್ಲಾಡಳಿತದಿಂದ ಸಂಭ್ರಮದ ಸಿದ್ದರಾಮೇಶ್ವರ ಜಯಂತಿ
ಕನ್ನಡಪ್ರಭ ವಾರ್ತೆ ಯಾದಗಿರಿ
ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದ ವಚನಕಾರ, ಸಮಾಜ ಸುಧಾರಕ ಮತ್ತು ಮಹಾನ್ ಶಿವಯೋಗಿಗಳಾಗಿದ್ದರೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭೋವಿ ವಡ್ಡರ ಸಮಾಜ ಜಿಲ್ಲಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದ ಇವರು ಸಾಮಾಜಿಕ ಕಾರ್ಯಗಳ ಮೂಲಕ ಕರ್ಮಯೋಗಿಯಾಗಿದ್ದರು. ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದು ಲಿಂಗಾಂಗ ಸಾಮರಸ್ಯದ "ಶಿವಯೋಗಿ "ಯಾಗಿ ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಹರಿಹಾರರಾಗಿದ್ದರೆಂದು ಶಾಸಕರು ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, 12ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಇವರೊಬ್ಬರು. ಇವರ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ಆಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ್ದರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಸಕನಳ್ಳಿ ವಿಷ್ಣು ಆಶ್ರಮದ ಮಾರುತಿ ತಾತಾ, ಕೆಂಭಾವಿಯ ಬಂಗಾರಪ್ಪ ರಂಗನಾಥ ಸ್ವಾಮಿ,ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರು, ಬಿಜೆಪಿ ನಾಯಕ ರಾಚಣ್ಣಗೌಡ ಮುದ್ನಾಳ್, ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಮಾರೆಪ್ಪ ವರ್ಕನಳ್ಳಿ ಇದ್ದರು. ಭೋವಿ ವಡ್ಡರ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ವಲ್ಲಾಪೂರೆ ಸ್ವಾಗತಿಸಿದರು. ಜ್ಯೋತಿಲಕ್ಷ್ಮಿ ತಡಿಬಿಡಿ ನಿರೂಪಿಸಿದರು.
ಭವ್ಯ ಮೆರವಣಿಗೆ: ಜಯಂತಿ ನಿಮಿತ್ಯ ಗುರುವಾರ ಬೆಳಗ್ಗೆ ಇಲ್ಲಿನ ಭೋವಿ ವಡ್ಡರ ಗಲ್ಲಿಯಿಂದ ಕಾರ್ಯಕ್ರಮದ ವೇದಿಕೆಯವರೆಗೂ ಸಿದ್ದರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಸಮಾಜದ ಅಪಾರ ಜನರು, ವಿಶೇಷವಾಗಿ ಮಹಿಳೆಯರು, ಮಕ್ಕಳು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
-5ವೈಡಿಆರ್4 :