ಕುರುಗೋಡಿಗೆ ಆಗಮಿಸಿದ ಕಾಳಿಕಾದೇವಿ ಮಠದ ಸ್ವಾಮೀಜಿ; ದರ್ಶನಕ್ಕೆ ಭಕ್ತರ ದಂಡು

KannadaprabhaNewsNetwork |  
Published : May 27, 2026, 02:30 AM IST
ಕುರುಗೋಡಿಗೆ ಮಂಗಳವಾರ ಆಗಮಿಸಿದ ಶಂಕರಾಚಾರಿ ಅವರು ತಮ್ಮನ್ನು ಭೇಟಿ ಮಾಡಲು ಬಂದ ಜನರ ಜೊತೆ ಮಾತನಾಡಿದರು.  | Kannada Prabha

ಸಾರಾಂಶ

ನಾನು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿಂದ ದೇಶ ಸಂಚಾರ ಮಾಡಿದೆ.

ಬಳ್ಳಾರಿ: ಸನಾತನ ಧರ್ಮ ಉಳಿಯಬೇಕು; ಬೆಳೆಯಬೇಕು. ಸಾಧು- ಸಂತರ ಈ ದೇಶದಲ್ಲಿ ಸದಾ ಶಾಂತಿ ನೆಲೆಸಬೇಕು. ಈ ಕಾರಣಕ್ಕಾಗಿಯೇ ನಾನು ಸನ್ಯಾಸ ಧರ್ಮ ಸ್ವೀಕರಿಸಿ ಹಿಮಾಲಯಕ್ಕೆ ತೆರಳಿ ತಪಸ್ಸು ಮಾಡಿದೆ. ದೇಶದ ಹತ್ತಾರು ಕಡೆಗಳಲ್ಲಿ ಮಠಗಳನ್ನು ಸ್ಥಾಪನೆ ಮಾಡಿದ್ದೇನೆ ಎಂದು ಗುಜರಾತ್‌ ರಾಜ್ಯದ ಅಹ್ಮದಾಬಾದ್‌ ಬಳಿಯ ಕಾಳಿಕಾದೇವಿ ಮಠದ (ಮಹಾದೇವ ಆಶ್ರಮ) ಶಂಕರಾಚಾರಿ ತಿಳಿಸಿದರು.

ಎರಡು ದಶಕಗಳ ಬಳಿಕ ಕುಲದೇವತೆ ಕಾಳಿಕಾದೇವಿಯ ದರ್ಶನಕ್ಕೆ ಊರಿಗೆ ಆಗಮಿಸಿರುವ ಅವರು, ಕನ್ನಡಪ್ರಭ ಜೊತೆ ಮಾತನಾಡಿದರು. ನಾನು ಬಳ್ಳಾರಿಯಿಂದ ಬೆಂಗಳೂರಿಗೆ ತೆರಳಿದ ಬಳಿಕ ಅಲ್ಲಿಂದ ದೇಶ ಸಂಚಾರ ಮಾಡಿದೆ. ಅಹ್ಮದಾಬಾದ್‌ನ ಮಹಾದೇವ ಆಶ್ರಮದ ಶ್ರೀನಿರಂಜನದೇವ್ ಅವರ ಬಳಿ ದೀಕ್ಷೆ ಪಡೆದು, ಗುರುಗಳನ್ನಾಗಿ ಸ್ವೀಕರಿಸಿದೆ.

9 ವರ್ಷ ಗುಜರಾತ್‌ನಲ್ಲಿದ್ದೆ. ಹಿಮಾಚಲಪ್ರದೇಶ, ಹರಿದ್ವಾರ ಸೇರಿದಂತೆ ದೇಶದ ನಾನಾ ಕಡೆ ಸಂಚಾರ ಮಾಡಿದ್ದೇನೆ. ಬನಾಸ್ ಕಟ್ಟಾನ ರಾಜನ್ ಪುರಿ ಮಹಾರಾಜ್ ಎಂದು ನನ್ನನ್ನು ಕರೆಯುತ್ತಾರೆ. ಕುಂದೇಶ್ವರಿ ಮಹಾರಾಜ್ ಎಂತಲೂ ಭಕ್ತರು ಕರೆಯುತ್ತಾರೆ. ನನಗೆ ಯಾವ ನೆಲೆಯೂ ಇಲ್ಲ. ಒಂದೆಡೆ ನಿಲ್ಲದೇ ಲೋಕ ಸಂಚಾರ ಮಾಡುತ್ತೇನೆ. ನನ್ನ ಗುರುಗಳ ಆಶೀರ್ವಾದದಂತೆ ಹೋದ ಕಡೆಯಲ್ಲಿ ಮಠಗಳನ್ನು ಸ್ಥಾಪಿಸಿ, ಜನರಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತೇನೆ ಎಂದು ತಿಳಿಸಿದರು.

20 ವರ್ಷಗಳ ಬಳಿಕ ನಮ್ಮೂರಿಗೆ ಬಂದಿದ್ದೇನೆ. ಕುರುಗೋಡಿನಲ್ಲಿರುವ ನಮ್ಮ ಕುಲದೇವತೆ ಕಾಳಮ್ಮದೇವಿ ಕನಸಿನಲ್ಲಿ ಬಂದು ಊರಿಗೆ ಬಂದು ದರ್ಶನ ಮಾಡಿಕೊಳ್ಳುವಂತೆ ಆಜ್ಞೆ ಮಾಡಿದಳು. ಹೀಗಾಗಿಯೇ ಬಂದೆ. ಸಹಜವಾಗಿ ನನ್ನನ್ನು ನೋಡಿ ತಂದೆ-ತಾಯಿ ಹಾಗೂ ಊರಿನ ಜನರು ಖುಷಿಯಾಗಿದ್ದಾರೆ. ತಂದೆ-ತಾಯಿಯ ದರ್ಶನ ಭಾಗ್ಯ ಸಿಕ್ಕಿದ್ದು ಹೆಚ್ಚು ಖುಷಿಯಾಗಿದೆ. ದೇವರ ಕೃಪೆಯಿಂದ ಈ ಎಲ್ಲವೂ ಸಾಧ್ಯವಾಗುತ್ತಿದೆ. ಕಾಳಿಕಾದೇವಿ ಆಜ್ಞೆ ಮಾಡಿದಾಗ ಮತ್ತೆ ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ತಿಳಿಸಿದರು.

20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಕುರುಗೋಡಿನ ಚಂದ್ರಶೇಖರ ಆಚಾರಿ-ಚಂದ್ರಕಲಾ ದಂಪತಿಯ ಏಕೈಕ ಪುತ್ರ ಶಂಕರಾಚಾರಿ ಅವರು ಹರಿದ್ವಾರದ ಸ್ವಾಮೀಜಿಯೊಬ್ಬರ ಭೇಟಿಯಿಂದ ಸನಾತನ ಧರ್ಮ ಬೆಳವಣಿಗೆ ಹಾಗೂ ಲೋಕ ಕಲ್ಯಾಣಕ್ಕಾಗಿ ಅಖಾಡಕ್ಕೆ ಸೇರಿಕೊಂಡಿದ್ದಾರೆ. ಬಳಿಕ ಹಿಮಾಲಯದಲ್ಲಿ ತಪಸ್ಸು ಮಾಡಿ ಅಖಾಡಕ್ಕೆ ಸೇರಿಕೊಂಡಿದ್ದಾರೆ. ಬಳಿಕ ಅಹ್ಮದಾಬಾದ್‌ನ ಬಳಿಯ ಕಾಳಿಕಾದೇವಿ (ಮಹಾದೇವ ಆಶ್ರಮ)ದಲ್ಲಿ ಸೇರಿಕೊಳ್ಳುತ್ತಾರೆ. ದೇಶದ ನಾನಾ ಕಡೆಗಳಲ್ಲಿ ಮಹಾದೇವ ಆಶ್ರಮ ಸ್ಥಾಪಿಸಿರುವ ಶಂಕರಾಚಾರಿ ಅವರು ಕುರುಗೋಡಿನಲ್ಲಿಯೂ ಆಶ್ರಮ ಸ್ಥಾಪಿಸುವ ಸಂಕಲ್ಪ ಮಾಡಿದ್ದಾರೆ.

"ಮನೆಬಿಟ್ಟು ಹೋದಾತ ಸ್ವಾಮೀಜಿಯಾಗಿ ಪತ್ತೆ " 20 ವರ್ಷಗಳ ಬಳಿಕ ಕುರುಗೋಡಿಗೆ ಮರಳುತ್ತಿರುವ ಕಾಳಿಕಾದೇವಿ ಮಠದ ಸ್ವಾಮೀಜಿ ಎಂಬ ಶೀರ್ಷಿಕೆಯಡಿ "ಕನ್ನಡಪ್ರಭ " ಮೇ 26ರಂದು ವರದಿ ಪ್ರಕಟಿಸಿತ್ತು.

ಸ್ವಾಮಿ ದರ್ಶನಕ್ಕೆ ಭಕ್ತರ ದಂಡು:

ಶಂಕರಾಚಾರಿ ಕುರುಗೋಡು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ನೂರಾರು ಭಕ್ತರು ಜಮಾಯಿಸಿದ್ದು, ದರ್ಶನ ಪಡೆಯುತ್ತಿದ್ದಾರೆ.

ಕನ್ನಡ ಸ್ಪಷ್ಟವಾಗಿ ಮಾತನಾಡದ ಶಂಕರಾಚಾರಿ ಅವರು ಹಿಂದಿ ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ನಾನು ಸನ್ಯಾಸಿಯಷ್ಟೇ. ನಿಮ್ಮಂತೆ ಮನುಷ್ಯ. ದೇವರ ದರ್ಶನಕ್ಕಾಗಿ ಸಾಧನೆ ಮಾಡುತ್ತಿದ್ದೇನಷ್ಟೇ. ಲೋಕ ಕಲ್ಯಾಣಕ್ಕಾಗಿ ಸಾಧನೆ ಮಾಡುತ್ತಿದ್ದೇನೆ. ನಾನು ಒಂದೆಡೆ ನೆಲೆ ನಿಲ್ಲುವಂತಿಲ್ಲ. ನಮ್ಮ ಅಖಾಡದ ಆಜ್ಞೆಯಂತೆ ತಪಸ್ಸು ಮತ್ತಿತರ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತೇನೆ ಎಂದು ಭಕ್ತರಿಗೆ ತಿಳಿಸಿದರು. ಇನ್ನು ಎರಡು ದಿನಗಳ ಕಾಲ ಕುರುಗೋಡಿನಲ್ಲಿರುವೆ. ಜನರ ದರ್ಶನ ಪಡೆದು ನಮ್ಮ ಅಖಾಡಕ್ಕೆ ಮರಳುವೆ ಎಂದ ಶಂಕರಾಚಾರಿ ಸ್ವಾಮೀಜಿ ತಿಳಿಸಿದರು.

ಎರಡು ದಶಕಗಳ ಬಳಿಕ ಮನೆಗೆ ಬಂದ ಮಗನನ್ನು ಕಂಡು ತಂದೆ-ತಾಯಿ ಭಾವುಕರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳು ಒಂದಾಗುವ ಕಾಲ ಸನ್ನಿಹಿತ: ರಾಜು ಖಾನಪ್ಪನವರ
ಗ್ಯಾರಂಟಿ ಯೋಜನೆ ಬಡವರಿಗೆ ತಲುಪಿಸಿ: ನಾಗರಾಜ ಮಡಿವಾಳರ