ಗದಗ: ಮಠ ಪರಂಪರೆಯಲ್ಲಿ ತೋಂಟದ ಶ್ರೀಗಳ ಬದುಕು ಸಮಾಜಮುಖಯಾಗಿತ್ತು. ತೋಂಟದಾರ್ಯ ಪೀಠಕ್ಕೆ ಪೀಠಾಧಿಪತಿಗಳಾದ ನಂತರ ಅವರು ಗೈದ ಕಾರ್ಯ ಅಗಾದವಾದುದು. ಅಜ್ಞಾನ, ಮೂಢನಂಬಿಕೆ ಹೋಗಲಾಡಿಸುವುದು. ಶರಣ ಸಂಪ್ರದಾಯದಂತೆ ಎಲ್ಲರೂ ಸಮಾನರು, ಬಸವೇಶ್ವರ ವಚನದಂತೆ ಹಾಗೂ ಕಾಯಕವೇ ಕೈಲಾಸ ತತ್ವದಡಿ ಮಠವನ್ನು ಕಟ್ಟುವುದು ಪೂಜ್ಯರ ಸಂಕಲ್ಪವಾಗಿತ್ತು ಎಂದು ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯ ಕಾರ್ಯದರ್ಶಿ ಶಿವನಗೌಡ ಗೌಡರ ಹೇಳಿದರು.
ಲಿಂಗಾಯತ ಸಮಾಜದಲ್ಲಿ ಅಜ್ಞಾನ-ಮೂಢನಂಬಿಕೆ ತೊಲಗಿಸಿ, ಶ್ರೀಮಠದಿಂದ ನೂರಾರು ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳನ್ನು ತೆರೆದು ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಸೌಲತ್ತು ದೊರೆಯುವಂತೆ ಮಾಡಿದರು. ಹಾಗೆಯೇ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಗೆ ಹೋರಾಟದ ನೇತೃತ್ವ ವಹಿಸಿ ಈ ಮೂಲಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿಸುವಲ್ಲಿ ಯಶಸ್ವಿಯಾದರು ಎಂದರು.
ಕನ್ನಡ ನಾಡು ನುಡಿ ಉಳಿವಿಗಾಗಿ ಅವರು ಈ ಹಿಂದೆಯೇ ಗೋಕಾಕ ಹೋರಾಟದ ಮುಂಚೂಣಿಯಲ್ಲಿದ್ದರು. ಜತೆಗೆ ನಂಜುಂಡಪ್ಪ ವರದಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಪೋಸ್ಕೋ ಚಳುವಳಿಯ ಮೂಲಕ ಕಪ್ಪತ್ತಗುಡ್ಡ ಉಳಿಕೆ ಹೋರಾಟದ ನಡೆಸಿದ್ದು ಐತಿಹಾಸಿಕವಾಗಿದೆ. ಮಠಾಧೀಶ್ವರರೊಬ್ಬರು ಕರುನಾಡಿನ ಇತಿಹಾಸದಲ್ಲಿ ಇಷ್ಟೊಂದು ಮಹತ್ ಕಾರ್ಯ ಮಾಡಿದ್ದು ಇದೇ ಪ್ರಥವಾಗಿದೆ. ಈ ರೀತಿ ಇತರ ಮಠಾಧೀಶರಿಗೆ ಮಾದರಿಯಾಗಿ ಅಹರ್ನಿಶಿ ಕಾರ್ಯಗೈದರು. ತೋಂಟದ ಸಿದ್ದಲಿಂಗ ಶ್ರೀಗಳ ಬದುಕು ವಿಸ್ಮಯ, ಅದ್ಭುತವಾದುದು ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ವಿ.ಕೆ. ಕರಿಗೌಡರ ವಹಿಸಿದ್ದರು. ನೀಲಮ್ಮ ಎಂ. ಬಾವಿ ಪ್ರಾರ್ಥಿಸಿದರು. ಶರಣಪ್ಪ ಎಸ್. ಅಂಗಡಿ ಸ್ವಾಗತಿಸಿದರು. ಪ್ರಕಾಶ ಅಸುಂಡಿ ವಂದಿಸಿದರು. ಪ್ರಸಾದ ಸೇವೆಯನ್ನು ಮೃತ್ಯುಂಜಯ ಜಿನಗಾ ವಹಿಸಿದ್ದರು.