ಮೊಬೈಲ್‌, ಸಾಮಾಜಿಕ ಜಾಲತಾಣದಿಂದ ಮಾನಸಿಕ ಅಶಾಂತಿ: ಸ್ವಾಮಿ ಸರ್ವಪ್ರಿಯಾನಂದ

KannadaprabhaNewsNetwork |  
Published : Nov 22, 2026, 02:45 AM IST
ಮಂಗಳೂರು ರಾಮಕೃಷ್ಣ ಮಠದಲ್ಲಿ ಪ್ರಬೋಧ ಉಪನ್ಯಾಸ ಮಾಲಿಕೆಗೆ ಚಾಲನೆ ನೀಡಲಾಯಿತು | Kannada Prabha

ಸಾರಾಂಶ

ಮಂಗಳೂರು ರಾಮಕೃಷ್ಣ ಮಠದಲ್ಲಿ ನಡೆಯುತ್ತಿರುವ ಪ್ರಬೋಧ ಉಪನ್ಯಾಸ ಮಾಲಿಕೆಯ ಮೊದಲನೇ ದಿನದ ಉಪನ್ಯಾಸ

ಮಂಗಳೂರು: ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಮಾನವನ ಗಮನವನ್ನು ಸೆಳೆಯುವ ಮೂಲಕ ಅದನ್ನೇ ಒಂದು ವ್ಯಾಪಾರಿಕ ವಸ್ತುವಾಗಿ ಬಳಸಿಕೊಳ್ಳುತ್ತಿವೆ. ನಿರಂತರವಾಗಿ ಬರುವ ಮೊಬೈಲ್ ಅಧಿಸೂಚನೆಗಳು, ಸಂದೇಶಗಳು ಹಾಗೂ ವಿವಿಧ ಡಿಜಿಟಲ್ ಆಕರ್ಷಣೆಗಳು ನಮ್ಮ ಏಕಾಗ್ರತೆಗೆ ಅಡ್ಡಿಯಾಗುತ್ತಿವೆ. ಕೆಲವರು ಆನ್‌ಲೈನ್ ಜೂಜಾಟದಂತಹ ಚಟುವಟಿಕೆಗಳಿಗೆ ದಾಸರಾಗುತ್ತಿದ್ದು, ಇಂತಹ ವ್ಯಸನಗಳು ನಿಧಾನವಾಗಿ ಮಾನಸಿಕ ಅಶಾಂತಿ ಮತ್ತು ಚಡಪಡಿಕೆಗೆ ಕಾರಣವಾಗುತ್ತವೆ ಎಂದು ಅಮೆರಿಕಾದಲ್ಲಿರುವ ನ್ಯೂಯಾರ್ಕ್ ವೇದಾಂತ ಸೊಸೈಟಿಯ ರೆಸಿಡೆಂಟ್ ಮಿನಿಸ್ಟರ್ ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾಗಿರುವ ಸ್ವಾಮಿ ಸರ್ವಪ್ರಿಯಾನಂದಜಿ ನುಡಿದರು.

ಮಂಗಳೂರು ರಾಮಕೃಷ್ಣ ಮಠದಲ್ಲಿ ನಡೆಯುತ್ತಿರುವ ಪ್ರಬೋಧ ಉಪನ್ಯಾಸ ಮಾಲಿಕೆಯ ಮೊದಲನೇ ದಿನದ ಉಪನ್ಯಾಸಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಮಾನಸಿಕ ಅಶಾಂತಿಗೆ ಪರಿಹಾರವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು, ಸಂಗೀತ ಕಲಿಯುವುದು ಹಾಗೂ ಸಂಗೀತ ವಾದ್ಯಗಳನ್ನು ನುಡಿಸುವಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಬಹುದು. ಇಂತಹ ಚಟುವಟಿಕೆಗಳು ಮನಸ್ಸಿಗೆ ತರಬೇತಿ ನೀಡುವುದರ ಜೊತೆಗೆ ಗಮನವನ್ನು ಒಂದೆಡೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಪಾರ ಏಕಾಗ್ರತೆಯನ್ನು ಹೊಂದಿರುವ ವ್ಯಕ್ತಿಯು ತಾನು ತೊಡಗಿಸಿಕೊಂಡಿರುವ ಕಾರ್ಯದಲ್ಲಿ ಎಷ್ಟು ತನ್ಮಯನಾಗುತ್ತಾನೆಂದರೆ ಸುತ್ತಮುತ್ತಲಿನ ಪರಿಸರವನ್ನೇ ಮರೆತುಬಿಡುತ್ತಾನೆ. ನೀವು ಯಾವುದೇ ಕೆಲಸವನ್ನು ಮಾಡಿದರೂ, ಅದನ್ನು ಸಾಧ್ಯವಾದಷ್ಟು ಪೂರ್ಣ ಗಮನ ಮತ್ತು ಏಕಾಗ್ರತೆಯಿಂದ ಮಾಡಿ ಎಂದರು.

ಉಪನ್ಯಾಸದ ನಂತರ ಸ್ವಾಮೀಜಿಯವರೊಂದಿಗೆ ವಿಶೇಷ ಸಂವಾದ ನೆರವೇರಿತು. ಕಾರ್ಯಕ್ರಮದ ಮೊದಲು ಬೆಂಗಳೂರಿನ ಸಿಂಗಿಂಗ್ ದಿ ಸೇಂಟ್ಸ್ ತಂಡದವರು ಭಜನೆಗಳನ್ನು ಹಾಡಿದರು.

ಸ್ವಾಮಿ ಸರ್ವಪ್ರಿಯಾನಂದಜಿ ಅವರು ಎರಡು ದಿನಗಳ ಉಪನ್ಯಾಸಗಳನ್ನು ನಡೆಸಿಕೊಡಲಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆದ ಮೊದಲನೇ ಅವಧಿಯನ್ನು ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಡಾ. ಜೀವರಾಜ್ ಸೊರಕೆ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಸ್ವಾಮಿ ಸರ್ವಪ್ರಿಯಾನಂದಜಿ ಅವರಿಂದ ‘ದ ಪವರ್ ಆಫ್ ಫೋಕಸ್ ಇನ್ ಏಜ್ ಆಫ್ ಡಿಸ್ಟ್ರಾಕ್ಷನ್’ ಎಂಬ ವಿಷಯದ ಕುರಿತು ಉಪನ್ಯಾಸ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನದಲ್ಲಿ ವಸತಿ, ಊಟೋಪಹಾರ ಸಮರ್ಪಕವಾಗಿರಲಿ
ಅಧಿವೇಶನದಲ್ಲಿ ಉಕ ಸಮಸ್ಯೆಗಳ ಚರ್ಚೆಗೆ ಆದ್ಯತೆ