ಯಲ್ಲಾಪುರ: ಸಂಕಲ್ಪ ಉತ್ಸವ ನಾಡಿನಾದ್ಯಂತ ಛಾಪು ಮೂಡಿಸಿದೆ. ಸಂಕಲ್ಪದಿಂದ ಉತ್ಸವ, ಸಂಕಲ್ಪಕ್ಕೋಸ್ಕರ ಉತ್ಸವ. ಸಮಾಜದಲ್ಲಿ ಕಲೆ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವ ಅತ್ಯಂತ ಮಹತ್ವದ ಕಾರ್ಯವಾಗಿದೆ. ಅಶ್ರದ್ಧೆಯೆಂಬ ನಕಾರಾತ್ಮಕ ವಾದವನ್ನು ಶ್ರದ್ಧೆಯೆಂಬ ಸಕಾರಾತ್ಮಕ ಚಿಂತನೆಯಿಂದ ಮುನ್ನಡೆದು ಸತ್ಯಕ್ಕಾಗಿ ನಿರಂತರ ಪ್ರಯತ್ನಿಸಿದರೆ ಯಶಸ್ವಿ ವ್ಯಕ್ತಿಯಾಗಬಹುದು ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.
ಒಳ್ಳೆಯ ಸಂಕಲ್ಪದಿಂದ ಸದುದ್ದೇಶದಿಂದ ನಡೆದು ಬಂದ ಸಂಕಲ್ಪೋತ್ಸವ. ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತೆ ಮತ್ತೆ ಸಂಕಲ್ಪ ಮಾಡಬೇಕು. ದಾನ ಶ್ರೇಷ್ಠವಾದದ್ದು. ಅದನ್ನು ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು. ಐದು ದಿನದ ಉತ್ಸವದಲ್ಲಿ ಯತಿವರೇಣ್ಯರ ಸಾನ್ನಿಧ್ಯವಿದೆ. ಇದೇ ಉತ್ಸವದ ಚೈತನ್ಯ ಶಕ್ತಿ. ಸಜ್ಜನರ, ಸಾತ್ವಿಕರ ಸಂಪರ್ಕದಿಂದ ಶ್ರೇಷ್ಠತೆ ಬೆಳೆಸಿಕೊಳ್ಳಬಹುದು. ಯಕ್ಷಗಾನದಲ್ಲಿ ಪೌರಾಣಿಕ ಕಥಾನಕ ಇದೆಯಾದರೂ, ಅದರಲ್ಲಿ ವ್ಯಾಸ, ಶುಕ, ವಾಲ್ಮೀಕಿ, ಅಗಸ್ತ್ಯ, ಮಾರ್ಕಂಡೇಯ ಮುಂತಾದ ಮಹಾತಪಸ್ವಿಗಳ ಜೀವನದ ಸಾಧನೆಗಳ ಕುರಿತು ಯಕ್ಷಗಾನ ಪದ್ಯ ರಚನಾಕಾರರು ಯಕ್ಷಗಾನ ಪುಸ್ತಕ ರಚಿಸಿ, ಯಕ್ಷಗಾನ ವೇದಿಕೆಯಲ್ಲಿ ನಡೆಯುವಂತಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ.
ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಈ ಉತ್ಸವ ನಡೆಸಿಕೊಂಡು ಬರುವುದು ಸುಲಭವಲ್ಲ. ಈ ವರ್ಷ ಎರಡು ಆಯಾಮ ನೀಡಿದೆ. ರಾಷ್ಟ್ರನಾಯಕ ರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸಂಸ್ಮರಣೆ. ಒಬ್ಬ ಜಿಲ್ಲೆಯ ಧೀಮಂತ ನಾಯಕನಾಗಿ ಸ್ವಸಾಮರ್ಥ್ಯದಿಂದ ಭಾಷೆ, ಚತುರತೆ, ಸಂಘಟನೆ, ವಾಗ್ಮಿ, ದಕ್ಷತೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಸಾಮಾನ್ಯರಾಗಿ ಗುರುತಿಸಿಕೊಂಡಿದ್ದರು. ಅವರ ಕುರಿತಾಗಿ ಈ ವೇದಿಕೆಯಲ್ಲಿ ಸ್ಮರಿಸಲಾಗುತ್ತಿದೆ ಎಂದರು.ಸಂಕಲ್ಪ ಉತ್ಸವದ ರೂವಾರಿ ಪ್ರಮೋದ ಹೆಗಡೆ, ಉದ್ಯಮಿ ಶ್ರೀನಿವಾಸ ಧಾತ್ರಿ, ರೈತ ಮುಖಂಡ ಪಿ.ಜಿ. ಭಟ್ಟ ಬರಗದ್ದೆ, ನ್ಯಾಯವಾದಿ ರವೀಂದ್ರನಾಥ ನಾಯ್ಕ, ಪತ್ರಕರ್ತ ಬೀರಣ್ಣ ನಾಯ್ಕ ಮೊಗಟಾ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಪತ್ರಕರ್ತ, ಕವಿ ಸುಬ್ರಾಯ ಬಿದ್ರೆಮನೆ, ಪ್ರಶಸ್ತಿ ಪುರಸ್ಕೃತರಾದ ನ್ಯಾಯವಾದಿ ಗಣಪತಿ ಭಟ್ಟ ಬೆಂಗಳೂರು, ಕರಕುಶಲಕರ್ಮಿ ಬಲರಾಮ ಗುಡಿಗಾರ, ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ, ಸಾಮಾಜಿಕ ಕಾರ್ಯಕರ್ತ ಗಣಪತಿ ಮಾನಿಗದ್ದೆ ಉಪಸ್ಥಿತರಿದ್ದರು.