ದೇಶಪ್ರೇಮ ಪರಿಚಯಿಸುವ ಸ್ವಾತಂತ್ರ್ಯ ಜ್ಯೋತಿ ರಥಯಾತ್ರೆ ಹಾವೇರಿಗೆ ಆಗಮನ

KannadaprabhaNewsNetwork |  
Published : Aug 13, 2026, 02:15 AM IST
ಹಾವೇರಿಯ ಮೈಲಾರ ಮಹಾದೇವಪ್ಪ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸುವ ಮೂಲಕ ಮೊದಲ ದಿನದ ರಥಯಾತ್ರೆ ಸಂಪನ್ನಗೊಂಡಿತು. | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯಕ್ಕೆ ಹುತಾತ್ಮರಾದ ಮತ್ತು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಜನಸಮೂಹಕ್ಕೆ ಮತ್ತೆ ತಿಳಿಸುವ ಉದ್ದೇಶದಿಂದ ಭಾರತ ಸ್ವಾತಂತ್ರ್ಯದ ಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

ಹಾವೇರಿ: ದೇಶದ ಸ್ವಾತಂತ್ರ್ಯಕ್ಕೆ ಹುತಾತ್ಮರಾದ ಮತ್ತು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಜನಸಮೂಹಕ್ಕೆ ಮತ್ತೆ ತಿಳಿಸುವ ಉದ್ದೇಶದಿಂದ ಭಾರತ ಸ್ವಾತಂತ್ರ್ಯದ ಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೂರು ದಿನ ಜರುಗುವ ಈ ರಥಯಾತ್ರೆಯ ಮೂಲಕ ಇಂದಿನ ಪೀಳಿಗೆಗೆ ಹಿರಿಯರ ದೇಶಪ್ರೇಮವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಜಗದೀಶ ಮಹಾರಾಜಪೇಟ ಹೇಳಿದರು.

ಶಿರಹಟ್ಟಿ ತಾಲೂಕಿನ ಕೋಗನೂರ ಗ್ರಾಮದಿಂದ ಆರಂಭವಾದ ಜ್ಯೋತಿ ರಥಯಾತ್ರೆಯಲ್ಲಿ ಅವರು ಮಾತನಾಡಿದರು. ಮೈಲಾರ ಮಹಾದೇವಪ್ಪನವರ ಜತೆಗೆ ಹುತಾತ್ಮರಾದ ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳರ ಸ್ವಗ್ರಾಮದಿಂದ ಈ ರಥಯಾತ್ರೆಗೆ ಚಾಲನೆ ನೀಡಬೇಕಿತ್ತು. ಈ ಊರಿಗೆ ಐತಿಹಾಸಿಕ ಹಿನ್ನೆಲೆ ಇದೆ. ಸಣ್ಣ ಊರಾದರೂ 18 ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿದ್ದರು ಎಂಬುದು ಅಭಿಮಾನದ ಸಂಗತಿ. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರ ಆಗಿದ್ದರು. ಅವರ ಸ್ಮರಣೆಗೆ ಷಡಕ್ಷರಪ್ಪ ರುದ್ರಪ್ಪ ಮಹಾರಾಜಪೇಟ ಪ್ರತಿಷ್ಠಾನ ಮೂಲಕ ಈ ರಥಯಾತ್ರೆ ಹಮ್ಮಿಕೊಂಡಿದ್ದೇವೆ. ಇದು ಹಾವೇರಿ ಜಿಲ್ಲೆಯ ಪ್ರಮುಖ ಪಟ್ಟಣ ಮತ್ತು ಹಳ್ಳಿಗಳಲ್ಲಿ ಸಂಚರಿಸಲಿದೆ ಎಂದರು.

ನಿವೃತ್ತ ಶಿಕ್ಷಕ ಎಚ್.ಎಸ್. ಕೆಂಗುಡ್ಡಪ್ಪನವರ ಮಾತನಾಡಿ, ನಾವು ಸಣ್ಣವರಿದ್ದಾಗ ನಮ್ಮೂರಿನ ಸ್ವಾತಂತ್ರ್ಯ ಯೋಧರ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದೆ. ಅವರು ದೇಶಕ್ಕಾಗಿ ಮಾಡಿದ ಕಾರ್ಯಗಳನ್ನು ಕೇಳಿ ನಮಗೆ ರೋಮಾಂಚನ ಆಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ನಮ್ಮ ಹಿರಿಯರ ನಿಸ್ವಾರ್ಥ ಸೇವೆ ಮರೀಚಿಕೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ರಥಯಾತ್ರೆ ಹಮ್ಮಿಕೊಂಡಿರುವುದು ಖುಷಿ ತಂದಿದೆ ಎಂದರು.

ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿ, ನಮ್ಮ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಹೆಸರಿನಡಿ ಸಾಕ್ಷ್ಯಚಿತ್ರ ನಿರ್ಮಿಸಿ, ಅದೇ ಹೆಸರಿನಲ್ಲಿ ಪುಸ್ತಕ ಪ್ರಕಟಿಸಿರುವೆ. ಮತ್ತೆ ಈಗ ವಿದ್ಯಾರ್ಥಿಗಳು ಮತ್ತು ಯುವಕರು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ತಿಳಿದುಕೊಳ್ಳಲಿ ಎಂದು ಆತ್ಮಾರ್ಪಣ ನಾಟಕ ಪ್ರಕಟಿಸುತ್ತಿರುವೆ ಎಂದರು.

ಕೋಗನೂರ ಗ್ರಾಮದಲ್ಲಿನ ಹುತಾತ್ಮ ಮೈಲಾರ ಮಹಾದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳರ ಪುತ್ಥಳಿ ಸೇರಿ ನಾಗರಮಡುವು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮುದುಕಪ್ಪ ಹಡಪದ ಪುತ್ಥಳಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಹಾಲಗಿ, ಕೊರಡೂರ, ಹೊಸರಿತ್ತಿ, ಕರ್ಜಗಿ ಮೂಲಕ ಸಾಗಿ ಹಾವೇರಿಗೆ ಬಂದಾಗ ಸಂಗೂರ ಕರಿಯಪ್ಪ, ಹೊಸಮನಿ ಸಿದ್ದಪ್ಪ ಮತ್ತು ಮೈಲಾರ ಮಹಾದೇವಪ್ಪ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ಮೊದಲ ದಿನದ ರಥಯಾತ್ರೆ ಸಂಪನ್ನಗೊಂಡಿತು. ಈ ವೇಳೆ ಆವರಗೆರೆ ರುದ್ರಮುನಿ, ಸುಭಾಷ್ ಮಡಿವಾಳರ, ವೀರಯ್ಯ ಹಿರೇಮಠ, ಚನ್ನಪ್ಪ ಬೂದನೂರ, ವಿವೇಕಾನಂದ ಕಮತ, ಧರ್ಮಗೌಡ ಪಾಟೀಲ, ಶರಣಬಸವ ಚನ್ನೂರ, ಫಕ್ಕೀರೇಶ ಕೂರಗುಂದ, ಚನ್ನಪ್ಪ ಮಡಿವಾಳರ, ಶಂಭಯ್ಯ ಹಿರೇಮಠ, ಚನ್ನಪ್ಪ ಡಿಳ್ಳೆಪ್ಪನವರ, ಅಶೋಕ ಬಸಾಪುರ ಇದ್ದರು.

ಇಂದು ರಥಯಾತ್ರೆ ಸಾಗುವ ಮಾರ್ಗ: ಆ. 13ರಂದು ಸ್ವಾತಂತ್ರ್ಯದ ಜ್ಯೋತಿ ಹೊತ್ತ ರಥಯಾತ್ರೆ ರಾಣಿಬೆನ್ನೂರು ತಾಲೂಕಿನ ಕಾಕೋಳ, ರಾಣಿಬೆನ್ನೂರು ತಹಸೀಲ್ದಾರ್ ಕಚೇರಿ, ಮೆಣಸಿನಹಾಳ, ರಟ್ಟಿಹಳ್ಳಿ ಗ್ರಾಪಂ, ಹಿರೇಕೆರೂರು ತಹಸೀಲ್ದಾರ್ ಕಾರ್ಯಾಲಯ, ಚಿಕ್ಕೇರೂರ, ಚಿಕ್ಕೊಣತಿ, ಹಂಸಭಾವಿ, ಹಾನಗಲ್ಲ ತಹಸೀಲ್ದಾರ್‌ ಕಾರ್ಯಾಲಯ, ಬೆಳಗಾಲಪೇಟ್ ಮೂಲಕ ಸಾಗಿಬರಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 15ರಿಂದ ಜಾಬ್‌ ಕಾರ್ಡ್‌ ಮೇಳ, ವಿಶೇಷ ಜಾಗೃತಿ ಅಭಿಯಾನ
ಗ್ರಂಥಾಲಯಗಳು ಜ್ಞಾನದ ಭಂಡಾರ: ಡಾ. ಅನ್ನದಾನೀಶ್ವರ ಶ್ರೀ