ದೇಶಭಕ್ತಿ ಸಾರಿದ ತಿರಂಗಾ ಯಾತ್ರೆ

KannadaprabhaNewsNetwork |  
Published : Aug 13, 2026, 02:15 AM IST
ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬ್ಯಾಡಗಿ ಪಟ್ಟಣದಲ್ಲಿ ಬುಧವಾರ “ಯುಥ್ ಫಾರ್ ನೇಷನ್” ವತಿಯಿಂದ “ತಿರಂಗಾ ಯಾತ್ರೆ” ನಡೆಯಿತು. | Kannada Prabha

ಸಾರಾಂಶ

ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬ್ಯಾಡಗಿ ಪಟ್ಟಣದಲ್ಲಿ ಬುಧವಾರ “ಯುಥ್ ಫಾರ್ ನೇಷನ್” ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ತಿರಂಗಾ ಯಾತ್ರೆ” ಅದ್ಧೂರಿಯಾಗಿ ನಡೆಯಿತು. ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು ಪಾಲ್ಗೊಂಡಿದ್ದರು.

ಬ್ಯಾಡಗಿ: ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬ್ಯಾಡಗಿ ಪಟ್ಟಣದಲ್ಲಿ ಬುಧವಾರ “ಯುಥ್ ಫಾರ್ ನೇಷನ್” ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ತಿರಂಗಾ ಯಾತ್ರೆ” ಅದ್ಧೂರಿಯಾಗಿ ನಡೆಯಿತು. ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಾಭಿಮಾನ ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು ಪಾಲ್ಗೊಂಡಿದ್ದರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಿಂದ ಆರಂಭವಾದ ತಿರಂಗಾ ಯಾತ್ರೆ ಹಳೆಯ ಪುರಸಭೆ, ಮುಖ್ಯರಸ್ತೆ, ಮೋಟೆಬೆನ್ನೂರು ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ಆವರಣ ತಲುಪಿತು. ಯಾತ್ರೆಯುದ್ದಕ್ಕೂ ದೇಶಭಕ್ತಿ ಘೋಷಣೆಗಳು ಮೊಳಗಿದವು. ರಾಷ್ಟ್ರಧ್ವಜಗಳೊಂದಿಗೆ ಸಾಗಿದ ಯುವಕರು ಹಾಗೂ ವಿದ್ಯಾರ್ಥಿಗಳು ದೇಶಪ್ರೇಮದ ಸಂದೇಶ ಸಾರಿದರು.

100 ಅಡಿ ತಿರಂಗಾ: ಯಾತ್ರೆಯಲ್ಲಿ ಸುಮಾರು 100 ಅಡಿ ಉದ್ದದ ಬೃಹತ್ ತಿರಂಗ ಧ್ವಜವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಹಿಡಿದು ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಬೃಹತ್ ರಾಷ್ಟ್ರಧ್ವಜದೊಂದಿಗೆ ಸಾಗಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ಯಾವುದೇ ಪಕ್ಷಭೇದವಿಲ್ಲದೆ ರಾಷ್ಟ್ರಧ್ವಜದಡಿ ಎಲ್ಲರೂ ಒಂದಾಗಿ ಹೆಜ್ಜೆ ಹಾಕಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.

ಸ್ವಾತಂತ್ರ‍್ಯ, ತ್ಯಾಗ, ಬಲಿದಾನ ಫಲ: ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಾಭಿಮಾನ ಸಾರುವ ಉದ್ದೇಶದಿಂದ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಸ್ವಾತಂತ್ರ‍್ಯ ಎಂಬುದು ಅನೇಕ ಮಹನೀಯರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿದೆ. ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ತಿರಂಗಾ ಯಾತ್ರೆ ಏಕತೆಯ ಸಂಕೇತ: ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ದೇಶದ ಏಕತೆ ಮತ್ತು ಅಖಂಡತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಂತಹ ರಾಷ್ಟ್ರಭಕ್ತಿ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಯುವಜನತೆ ದೇಶದ ಇತಿಹಾಸ, ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ ಹಾಗೂ ಸಂವಿಧಾನದ ಮೌಲ್ಯಗಳನ್ನು ಅರಿತು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಯಾತ್ರೆಯಲ್ಲಿ ಮಾಜಿ ಸೈನಿಕರಾದ ಎನ್.ಎಸ್. ಬಂಡಿವಡ್ಡರ, ಮಹದೇವಪ್ಪ ಬಣಕಾರ, ರಾಜಶೇಖರ ಹೊಸಳ್ಳಿ, ನೂರಹಮ್ಮದ ಕೊತ್ವಾಲ್, ಶೇಖರಗೌಡ ಪಾಟೀಲ, ಗೌರಿಶಂಕರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಶಿವಬಸಪ್ಪ ಕುಳೆನೂರ, ಎಂ.ಎಸ್. ಪಾಟೀಲ, ವಿಜಯ ಬಳ್ಳಾರಿ, ಅನಿಲ ಬೊಡ್ಡಪಾಟಿ, ಜಿತೇಂದ್ರ ಸುಣಗಾರ, ನಿಂಗಪ್ಪ ಆಡಿನವರ, ಸುರೇಶ ಉದ್ಯೋಗಣ್ಣನವರ, ವಿನಾಯಕ ಕಂಬಳಿ, ಪ್ರಶಾಂತ ಯಾದವಾಡ, ಗಣೇಶ ಅಚಲಕರ, ವಿನಯ ಹಿರೇಮಠ, ವಿಜಯ ಮಾಳಗಿ, ವಿದ್ಯಾ ಶೆಟ್ಟಿ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ ಭಾಗವಹಿಸಿದ್ದರು.

ರೋಟರಿ ಕ್ಲಬ್, ಜಯ ಕರ್ನಾಟಕ, ವ್ಯಾಪಾರಸ್ಥರು, ವಕೀಲರ ಸಂಘ, ಜೈನದ ಸಮುದಾಯದ ಮುಖಂಡರು, ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ನೌಕರರ ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರು, ಸೇರಿದಂತೆ ವಿವಿಧ ಸಮಾಜ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 15ರಿಂದ ಜಾಬ್‌ ಕಾರ್ಡ್‌ ಮೇಳ, ವಿಶೇಷ ಜಾಗೃತಿ ಅಭಿಯಾನ
ಗ್ರಂಥಾಲಯಗಳು ಜ್ಞಾನದ ಭಂಡಾರ: ಡಾ. ಅನ್ನದಾನೀಶ್ವರ ಶ್ರೀ