ಧ್ವಜಾರೋಹಣಕ್ಕೆ ಅಸಡ್ಡೆ: ಖಾಸಗಿ ಶಾಲೆಗಳ ಮೇಲೆ ಜಿಲ್ಲಾಡಳಿತ ನಿಗಾ!

KannadaprabhaNewsNetwork |  
Published : Aug 13, 2026, 02:15 AM IST
ಈ ಸುದ್ದಿಗೆ ಪೂರಕವಾಗಿ ಫೋಟೋ ಕಳಿಸಲಾಗಿದ್ದು ಬಳಸಿಕೊಳ್ಳುವುದು.  | Kannada Prabha

ಸಾರಾಂಶ

ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಂದು ಶಾಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸದೆ ಅಸಡ್ಡೆ ತೋರುವ ಖಾಸಗಿ ಶಾಲೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಂದು ಶಾಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸದೆ ಅಸಡ್ಡೆ ತೋರುವ ಖಾಸಗಿ ಶಾಲೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ.

ನಗರ ಸೇರಿದಂತೆ ಜಿಲ್ಲೆಯ ಹಲವು ಖಾಸಗಿ ಶಾಲೆಗಳು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಘೋಷಿಸುವ ಮೂಲಕ ಧ್ವಜಾರೋಹಣ ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಸಡ್ಡೆ ವಹಿಸುವ ಖಾಸಗಿ ಶಾಲೆಗಳಿಗೆ ಕಾನೂನು ಕ್ರಮದ ಬಿಸಿ ಮುಟ್ಟಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಮಹತ್ವದ ದಿನಗಳಂದು ಮಕ್ಕಳನ್ನು ಶಾಲೆಗೆ ಕರೆಸಿ ಧ್ವಜಾರೋಹಣ ನೆರವೇರಿಸುವ ಬದಲು ರಜೆ ನೀಡುವ ಪ್ರವೃತ್ತಿಯನ್ನು ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಮೈಗೂಡಿಸಿಕೊಂಡಿವೆ. ಈ ಕುರಿತು ಪೋಷಕರಲ್ಲೂ ತೀವ್ರ ಅಸಮಾಧಾನವಿದ್ದು, ಜಿಲ್ಲಾಡಳಿತಕ್ಕೆ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿ ಇಂತಹ ಶಾಲೆಗಳ ಮೇಲೆ ನಿಗಾ ವಹಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಶಾಲೆಗಳ ಮಾಹಿತಿ ಸಂಗ್ರಹ

ಸ್ವಾತಂತ್ರ್ಯೋತ್ಸವದಂದು ಶಾಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ಕಾರ್ಯಕ್ರಮ ನಡೆಸದ ಶಾಲೆಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ನಿರ್ಲಕ್ಷ್ಯ ತೋರುವ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿಯಮಾನುಸಾರ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಶಾಲೆಗಳನ್ನು ನಡೆಸುತ್ತಿರುವ ಸಂಸ್ಥೆಗಳ ಬಗ್ಗೆಯೂ ಮಾಹಿತಿ ಕಲೆಹಾಕಲು ಜಿಲ್ಲಾಡಳಿತ ಮುಂದಾಗಿದೆ. ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ, ಶಿಕ್ಷಕರ ನೇಮಕ, ವಿದ್ಯಾರ್ಥಿಗಳ ಸುರಕ್ಷತೆ, ಶುಲ್ಕ ನಿಯಮಗಳು ಸೇರಿದಂತೆ ವಿವಿಧ ವಿಚಾರಗಳಲ್ಲಿ ಲೋಪ ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ರಾಷ್ಟ್ರೀಯ ಹಬ್ಬಗಳು ಕೇವಲ ಸರ್ಕಾರಿ ಕಚೇರಿಗಳು ಹಾಗೂ ಸರ್ಕಾರಿ ಶಾಲೆಗಳಿಗೆ ಸೀಮಿತ ಎಂದು ಭಾವಿಸಿಕೊಂಡಂತಿರುವ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು, ದೇಶದ ಸ್ವಾತಂತ್ರ್ಯ ಹೋರಾಟ, ಸಂವಿಧಾನದ ಆಶಯಗಳು ಹಾಗೂ ರಾಷ್ಟ್ರೀಯ ಏಕತೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮಹತ್ವದ ದಿನದಂದು ಶಾಲೆಗಳಿಗೆ ರಜೆ ಘೋಷಿಸಿ ರಾಷ್ಟ್ರೀಯ ಹಬ್ಬದಿಂದ ದೂರ ಉಳಿಯುವ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಸ್ವಾತಂತ್ರ್ಯೋತ್ಸವ ದಿನದಂದು ಪ್ರತಿಯೊಂದು ಶಾಲೆಗಳು ಧ್ವಜಾರೋಹಣ ಮಾಡಿ, ರಾಷ್ಟ್ರಪ್ರಜ್ಞೆ ಮೂಡಿಸಬೇಕು. ಅಸಡ್ಡೆ ತೋರುವ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇನೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ, ಅಂತಹ ಶಿಕ್ಷಣ ಸಂಸ್ಥೆಗಳ ಮಾಹಿತಿ ಪಡೆಯುವಂತೆ ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಧ್ವಜಾರೋಹಣ ಮಾಡದೆ ನಿರ್ಲಕ್ಷ್ಯ ಮಾಡುವ ಸಾಕಷ್ಟು ಶಿಕ್ಷಣ ಸಂಸ್ಥೆಗಳು ನಗರದಲ್ಲಿಯೇ ಇವೆ. ಜಿಲ್ಲಾಡಳಿತ ಅಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಕಾರ್ಯ. ದೇಶದ ಅಭಿಮಾನ ಇಲ್ಲದ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಸೂಚಿಸಬೇಕು ಎಂದು ಬಳ್ಳಾರಿಯ ವಿಶಾಲನಗರದ ಸ್ನಾತಕೋತ್ತರ ವಿದ್ಯಾರ್ಥಿ ಎಚ್.ಕೆ. ಸುರೇಶ್ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಗಸ್ಟ್‌ 15ರಿಂದ ಜಾಬ್‌ ಕಾರ್ಡ್‌ ಮೇಳ, ವಿಶೇಷ ಜಾಗೃತಿ ಅಭಿಯಾನ
ಗ್ರಂಥಾಲಯಗಳು ಜ್ಞಾನದ ಭಂಡಾರ: ಡಾ. ಅನ್ನದಾನೀಶ್ವರ ಶ್ರೀ