ಬಳ್ಳಾರಿ: ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ, ಪಕ್ಷ ಪ್ರತಿಷ್ಠೆಯ ನಿಲುವುಗಳನ್ನು ಸಮರ್ಥಿಸಿಕೊಂಡರು.
ಇಲ್ಲಿನ ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ನಾಯಕರು, ವಾಲ್ಮೀಕಿ ಹಗರಣದಲ್ಲಿ ಸಿಲುಕಿಕೊಂಡಿರುವ ಸಚಿವ ನಾಗೇಂದ್ರ ಕೂಡಲೇ ರಾಜಿನಾಮೆ ನೀಡುವಂತೆ ಒತ್ತಾಯಿಸಿದರಲ್ಲದೆ, ಕಾಂಗ್ರೆಸ್ ಪಕ್ಷ ಕೋಟ್ಯಂತರ ರು. ಹಗರಣದ ಆರೋಪಿ ನಾಗೇಂದ್ರರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣವಾಗಿರುವುದನ್ನು ಸಿಎಂ ಆಗಿದ್ದ ಸಿದ್ಧರಾಮಯ್ಯನವರು ಸದನದಲ್ಲಿಯೇ ಒಪ್ಪಿಕೊಂಡಿದ್ದಾರೆ. ಸಚಿವ ನಾಗೇಂದ್ರ ಮೇಲಿನ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಿಲ್ಲ. ಹೀಗಾಗಿ, ಕೂಡಲೇ ರಾಜಿನಾಮೆ ನೀಡಬೇಕು. ಇಲ್ಲದೇ ಹೋದರೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಗಸ್ಟ್ 17ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು. ಎಸ್ಟಿ ಸಮುದಾಯ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳುವ ಮುನ್ನ ಸಚಿವ ನಾಗೇಂದ್ರ ಅವರು ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದರು. ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಮುಖಂಡರಾದ ಎಚ್. ಹನುಮಂತಪ್ಪ, ಡಾ. ಬಿ.ಕೆ. ಸುಂದರ್, ಮುರಹರಗೌಡ ಗೋನಾಳ್, ಪಾಲಿಕೆ ಸದಸ್ಯ ಹನುಮಂತಪ್ಪ, ಕೋಟೆ ನಾಗರಾಜ್, ಧರಪ್ಪ ನಾಯಕ, ಕೋಟೆ ನಾಗರಾಜ್, ಪುಷ್ಪಾ, ಓಬಳೇಶ್ ಮತ್ತಿತರರಿದ್ದರು.ರೆಡ್ಡಿ, ರಾಮುಲು ಮೇಲೆ ಆರೋಪಗಳಿಲ್ಲವೇ?
ದಲಿತರು ರಾಜಕೀಯವಾಗಿ ಬೆಳೆದರೆ ಬಿಜೆಪಿ ಸಹಿಸುವುದಿಲ್ಲ. ಹೀಗಾಗಿ, ಶ್ರೀರಾಮುಲು ಸೇರಿದಂತೆ ವಾಲ್ಮೀಕಿ ಸಮುದಾಯದ ನಾಯಕರಿಗೆ ಒತ್ತಡ ಹೇರಿ ಸಚಿವ ನಾಗೇಂದ್ರ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದೆ. ಬಿಜೆಪಿಯಲ್ಲಿರುವ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡದೆ ಅನ್ಯಾಯ ಮಾಡಿರುವ ಬಿಜೆಪಿ ನಾಯಕರು ಮಾತನಾಡುವ ಯಾವ ನೈತಿಕತೆ ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ವಾಲ್ಮೀಕಿ ಸಮಾಜದ ಮುಖಂಡರಾದ ಬಿ.ರಾಮ್ ಪ್ರಸಾದ್, ಮುದಿ ಮಲ್ಲಯ್ಯ, ಪಿ. ಜಗನ್ನಾಥ, ಸತ್ಯಪ್ಪ, ವಿಜಯಕುಮಾರ್ ಸಂಗನಕಲ್ಲು, ಸೋಮು ಮತ್ತಿತರರಿದ್ದರು.