ಭೂಮಿಗೆ ತಂಪೆರೆದ ಸ್ವಾತಿ ಮಳೆ: ತೋಟದ ಬೆಳೆಗೆ ಆಸರೆ

KannadaprabhaNewsNetwork |  
Published : Oct 25, 2026, 01:30 AM IST
24ಕೆಡಿವಿಜಿ1-ದಾವಣಗೆರೆಯಲ್ಲಿ ಶನಿವಾರ ಸುರಿಯುವ ಮಳೆಯಲ್ಲಿ ಸಾಗುತ್ತಿರುವ ದ್ವಿಚಕ್ರ ವಾಹನ ಸವಾರ. | Kannada Prabha

ಸಾರಾಂಶ

ಜಿಲ್ಲಾದ್ಯಂತ ಶನಿವರ ಇಡೀ ದಿನ ದಟ್ಟಮಳೆ ಮೋಡಗಳು ಆವರಿಸಿದ್ದು, ಜಿಲ್ಲಾ ಕೇಂದ್ರ, ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೋರು, ಮಂದಗತಿಯ ಮಳೆಯಾದ ಬಗ್ಗೆ ಮಾಹಿತಿ ಸಿಗುತ್ತಿವೆ.

- ದಾವಣಗೆರೆ ನಗರ, ಜಿಲ್ಲೆಯ ವಿವಿಧೆಡೆ ಭಾನುವಾರವೂ ಮಳೆ ಸಾಧ್ಯತೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾದ್ಯಂತ ಶನಿವರ ಇಡೀ ದಿನ ದಟ್ಟಮಳೆ ಮೋಡಗಳು ಆವರಿಸಿದ್ದು, ಜಿಲ್ಲಾ ಕೇಂದ್ರ, ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೋರು, ಮಂದಗತಿಯ ಮಳೆಯಾದ ಬಗ್ಗೆ ಮಾಹಿತಿ ಸಿಗುತ್ತಿವೆ.

ನಗರದಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸ್ವಾತಿ ಮಳೆಯಾಗಿದ್ದು, ಕಳೆದ ಕೆಲ ದಿನಗಳಿಂದ ಸೆಖೆಯಿಂದ, ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರಿಗೆ ತಂಪರೆಯುವಂತೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಶುಕ್ರವಾರ ಸಹ ತಾಲೂಕಿನ ವಿವಿಧೆಡೆ ಭಾರೀ ಮಳೆ ಸುರಿದಿದೆ. ಭರಮಸಾಗರ- ದಾವಣಗೆರೆ ಮಧ್ಯೆ ಭಾರೀ ಮಳೆಯಾಗಿದ್ದು, ಶನಿವಾರವೂ ಮಳೆಯ ಆರ್ಭಟ ಮುಂದುವರಿದಿತ್ತು.

ಮೋಡ ಕಟ್ಟಿದ್ದರೂ ಮಳೆ ಆಗುತ್ತದೆಂಬ ನಂಬಿಕೆಯನ್ನೇ ಜನರು ಕಳೆದುಕೊಂಡಿದ್ದರು. ಈಗ ಜೋರು ಮಳೆಯಾಗುವ ಮೂಲಕ ವಾತಾವರಣವನ್ನು ತಂಪಾಗಿಸಿದೆ. ಕೆಲಸ, ಕಾರ್ಯದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದವರು, ಮಾರುಕಟ್ಟೆಗೆ ಹೋಗಿದ್ದವರು ಮಳೆಯಿಂದ ಪಾರಾಗಲು ಪರದಾಡಿದರು. ಪರ ಊರುಗಳಿಂದ ಬಂದವರು ತಾವು ಹೋಗಬೇಕಾದ ಸ್ಥಳಕ್ಕೆ ಹೋಗುವುದಕ್ಕೆ ಪರಿತಪಿಸಿದರು.

ಜನತೆ ಆಟೋ, ಸಿಟಿ ಬಸ್ಸುಗಳಿಗಾಗಿ ಮುಗಿಬಿದ್ದಿದ್ದು ಕಂಡುಬಂದಿತು. ತೀವ್ರ ಬರಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ರೈತರ ಮೊಗದಲ್ಲಿ ಒಂದಿಷ್ಟು ಮಂದಹಾಸ ಮೂಡಿಸುವಂತೆ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಕಳೆಯನ್ನೇ ಕಳೆದುಕೊಂಡಿದ್ದ ತೋಟದ ಬೆಳೆಗಳು ಚೇತರಿಸಿಕೊಳ್ಳಲು ಈ ಮಳೆ ಸಹಕಾರಿಯಾಗಿದೆ. ಕಾದ ಕಾವಲಿಯಂತಾಗಿದ್ದ ಭೂಮಿಯು ಒಂದಿಷ್ಟು ತಂಪಾಗುವಂತೆ ಸುಮಾರು ಗಂಟೆಗಳ ಕಾಲ ಮಳೆಯಾಗಿದ್ದು, ರೈತರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.

ಹವಾಮಾನ ಇಲಾಖೆ ಪ್ರಕಾರ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ. ಶನಿವಾರ ಸಂಜೆಯೂ ದಟ್ಟ ಮೋಡಗಳು ಆವರಿಸಿದ್ದವು. ರಾತ್ರಿ ಗುಡುಗು-ಮಿಂಚಿನ ಸಮೇತ ಜೋರುಮಳೆ ಅಥವಾ ಜಿಟಿಜಿಟಿ ಮಳೆಯಾಗುವ ಸಾಧ್ಯತೆ ಇದೆ. ತಂಗಾಳಿ ಬೀಸುತ್ತಿರುವುದರಿಂದ ಜನರು ಒಂದಿಷ್ಟು ಸಮಾಧಾನಪಡುವಂತಾಗಿದೆ. ಭಾನುವಾರವೂ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದ್ದು, ಮತ್ತಷ್ಟು ಮಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಶನಿವಾರದ ದಿನ ಮಾರುಕಟ್ಟೆ, ಅಂಗಡಿ ಮುಂಗ್ಗಟ್ಟುಗಳು ಮಧ್ಯಾಹ್ನದ ನಂತರ ಮುಚ್ಚುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನವೇ ಜೋರು ಮಳೆ ಸುರಿದಿದ್ದರಿಂದ ನಗರಕ್ಕೆ ಖರೀದಿಗೆಂದು ಬಂದವರು, ಕೆಲಸ ಕಾರ್ಯಗಳಲ್ಲಿ ತೊಡದಿದ್ದವರು 2 ಗಂಟೆ ಕಾಲ ಸುರಿದ ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡಿದರು. ಮಳೆಗಾಲದಲ್ಲಿ ಸರಿಯಾಗಿ ಮಳೆಯನ್ನೇ ಕಾಣದಿದ್ದ ಜನರಿಗೆ ಮಳೆಯ ಅನುಭ‍ವ ಕಟ್ಟಿ ಕೊಡುವಂತೆ ಉತ್ತಮ ಮಳೆಯಾಗಿದೆ. ಇದರಿಂದ ಮನೆಯಿಂದ ಹೊರಗೆ ಹೋಗಿದ್ದವರು ಆಟೋ ರಿಕ್ಷಾಗಳಲ್ಲಿ ಮನೆ ತಲುಪಿದರೆ, ದ್ವಿಚಕ್ರ ವಾಹನ ಸವಾರರು ಮಳೆ ನಿಲ್ಲುವವರೆಗೆ ಕಾಯಬೇಕಾಯಿತು. ಆನಗೋಡು, ಹೆಬ್ಬಾಳ್, ಮಲ್ಲಶೆಟ್ಟಿಹಳ್ಳಿ, ಬಾಡ, ಕುರ್ಕಿ, ಆವರಗೆರೆ, ಬಾತಿ, ಕಕ್ಕರಗೊಳ್ಳ, ಆವರಗೊಳ್ಳ ಇತರೆ ಭಾಗದಲ್ಲೂ ಉತ್ತಮ ಮಳೆಯಾಗಿದೆ.

- - -

-24ಕೆಡಿವಿಜಿ1: ದಾವಣಗೆರೆಯಲ್ಲಿ ಶನಿವಾರ ಸುರಿಯುವ ಮಳೆಯಲ್ಲಿ ಸಾಗುತ್ತಿರುವ ದ್ವಿಚಕ್ರ ವಾಹನ ಸವಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಯ ಸಿಂಚನ ನಡುವೆಯೂ ಧಮ್ಮ ನಡಿಗೆ
ಶಿಕ್ಷಣದ ಮೂಲಕವೇ ಸಮುದಾಯ ಪರಿವರ್ತನೆ ಸಾಧ್ಯ