ಕನ್ನಡಪ್ರಭ ವಾರ್ತೆ ಹಾಸನ
ಈಜುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಈಜು ಕಲಿಸುವುದು ಒಳ್ಳೆಯದು ಎಂದು ಎಸ್ಪಿ ಮೊಹಮ್ಮದ್ ಸುಜಿತಾ ಸಲಹೆ ನೀಡಿದರು.ನಗರದ ಸಮೀಪ ತೇಜುರು ರಸ್ತೆಯ ಚಿಕ್ಕಕೊಂಡಗುಳ ಕೊಪ್ಪಲು ಬಳಿ ಇರುವ ಮಿಲೇನಿಯಮ್ ವರ್ಲ್ಡ್ ಶಾಲೆಯ ಸಿಬಿಎಸ್‌ಇ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜುಲೈ ೨೩ ರಿಂದ ೨೭ರವರೆಗೂ ನಡೆಯುವ ದಕ್ಷಿಣ ವಲಯ ಮಟ್ಟದ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತನ್ನ ಐಪಿಎಸ್ ತರಬೇತಿ ಅವಧಿಯಲ್ಲಿ ಕೂಡ ಈಜು ಸ್ಪರ್ಧೆ ಹಾಗೂ ಪರೀಕ್ಷೆ ಕೂಡ ನಡೆದಿತ್ತು. ತನಗೆ ಅದು ಸವಾಲು ಎನಿಸಿದರೂ ಈಜು ಸ್ಪರ್ಧೆಯಲ್ಲಿ ತಾನು ಕೂಡ ಭಾಗವಹಿಸಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಆಗಾಗ ಇಂತಹ ಈಜು ಸ್ಪರ್ಧೆಗಳನ್ನು ಆಯೋಜಿಸುವುದು ಒಳ್ಳೆಯ ಬೆಳವಣಿಗೆ. ಸ್ಪರ್ಧೆ ಆಯೋಜಿಸಿರುವ ಅಸೋಸಿಯೇಶನ್‌ಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಬಹುತೇಕ ಪೋಷಕರು ಮಕ್ಕಳಿಗೆ ಈಜು ಕಲಿಸಲು ಉತ್ತೇಜನ ನೀಡುತ್ತಿದ್ದಾರೆ. ಅಲ್ಲದೆ ದೂರದ ಊರುಗಳಿಗೆ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ, ಆಪತ್ಕಾಲದಲ್ಲಿ ಈ ವಿದ್ಯೆ ತುಂಬಾ ಉಪಯೋಗಕಾರಿ ಆಗಲಿದೆ. ಎಲ್ಲಾ ಸ್ಪರ್ಧಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ. ಗೆಲುವು ಸಾಧಿಸಿದವರು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತೆ ಆಗಲಿ ಎಂದು ಶುಭ ಹಾರೈಸಿದರು.ಇದೇ ವೇಳೆ ಮಿಲೇನಿಯಮ್ ವರ್ಲ್ಡ್ ಶಾಲೆಯ ಪ್ರಾಂಶುಪಾಲ ನಾಗಭೂಷಣ್, ಈಜುಪಟು ಹೇಮಂತ್ ಜೇನುಕಲ್ ಹಾಗೂ ಸಿ.ಬಿ.ಎಸ್.ಇ. ಬೋರ್ಡಿನ ಸಿದ್ದಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿ ಇದೆ ಮೊಟ್ಟ ಮೊದಲ ಬಾರಿಗೆ ಸಿಬಿಎಸ್ಸಿ ವತಿಯಿಂದ ನಡೆಯುವ ಇಷ್ಟು ದೊಡ್ಡಮಟ್ಟದ ಈಜು ಸ್ಪರ್ಧೆಯನ್ನು ಆಯೋಜಿಸುವ ಸುವರ್ಣ ಅವಕಾಶ ಇಂದು ನಮ್ಮ ಪಾಲಾಗಿದೆ. ಇದು ಇಡೀ ಹಾಸನ ಜಿಲ್ಲೆಗೆ ಸಂದ ಹೆಮ್ಮೆಯ ಸಂಗತಿ. ಈ ಈಜು ಸ್ಪರ್ಧೆಗೆ ಭಾಗವಹಿಸಲು ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ೮೦೦ಕ್ಕೂ ಅಧಿಕ ಸಿಬಿಎಸ್ಸಿ ಶಾಲೆಗಳಿಂದ ಸುಮಾರು ೪೦೦೦ಕ್ಕೂ ಅಧಿಕ ಸಿಬಿಎಸ್‌ಸಿ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ ಎಂದರು. ದಕ್ಷಿಣ ವಲಯ ಮಟ್ಟದ ದೊಡ್ಡ ಮಟ್ಟದ ಈಜು ಸ್ಪರ್ಧೆ ಏರ್ಪಡಿಸಿರುವುದಕ್ಕೆ ಸಂತೋಷವಾಗಿದೆ. ಈಜು ಸ್ಪರ್ಧೆಯನ್ನು ೨೭ ಜುಲೈವರೆಗೆ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಜುಪಟು ಹೇಮಂತ್ ಜೇನುಕಲ್, ಸಿಬಿಎಸ್‌ಇ ಬೋರ್ಡಿನ ಸಿದ್ದಪ್ಪ, ಮಿಲೇನಿಯಮ್ ವರ್ಲ್ಡ್ ಶಾಲೆಯ ನಿರ್ದೇಶಕ ಶರತ್, ಕೀರ್ತಿ ಪ್ರಸಾದ್, ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ದುರ್ಗಮ್ಮ, ದೈಹಿಕ ಶಿಕ್ಷಕ ದಯಾನಂದ್, ಕನ್ನಡ ಶಿಕ್ಷಕ ಶಿವಕುಮಾರ್, ಈಜು ಕೊಳದ ಅಕಾಡೆಮಿಕ್ ಕೋಚರ್ ಸಯ್ಯಾದ್ ಇತರರು ಇದ್ದರು.