ಹೊನ್ನಾವರ: ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಗುಂಡಬಾಳ ನದಿಯಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಸೋಮವಾರ ತಡರಾತ್ರಿಯೇ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಳವಾಗಿದೆ. ಪರಿಣಾಮ ನದಿ ಎಡಬಲದಂಡೆಯ ವ್ಯಾಪ್ತಿಯಲ್ಲಿನ ತೋಟ, ಗದ್ದೆ, ಮನೆಗಳಿಗೆನೀರು ನುಗ್ಗಿದೆ.
ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ, ಕಾವೂರು, ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿ, ಕೂಡ್ಲ ನದಿ ತಟದ ಎಡಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಜನರು ಆತಂಕದಲ್ಲಿ ಕಾಲ ಕಳೆಯುವಂತಾಯಿತು.ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಸೋಮವಾರ ರಾತ್ರೋರಾತ್ರಿಯೇ ನೀರು ಆವರಿಸಿದ್ದು, ದೋಣಿಯ ಮೂಲಕ ಜನ, ಜಾನುವಾರು ಸಾಗಾಟಕ್ಕೆ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿ ವರ್ಗ ವ್ಯವಸ್ಥೆ ಮಾಡಿ ಕಾಳಜಿ ಕೇಂದ್ರಕ್ಕೆ ಜನರನ್ನು ಕರೆತಂದರು.
ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಯಿತು.ನೋಡಲ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಇಲಾಖೆಯವರು ನೆರೆ ಪ್ರದೇಶಗಳ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಭಾಸ್ಕೆರಿ ಹೊಳೆಯಲ್ಲಿ ಕೂಡ ನೀರು ತುಂಬಿ ಹರಿಯುತ್ತಿರುವುದರಿಂದ ನದಿ ಅಂಚಿನ ತೋಟಗಳು ಜಲಾವೃತ ಆಗಿ, ಸ್ಥಳೀಯ ಮನೆಗಳಿಗೆ ನೀರು ನುಗ್ಗಿದೆ.
ವಿಪತ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ, ಜನರನ್ನು ಕಾಳಜಿ ಕೇಂದ್ರಕ್ಕೆ ಕರೆತಂದಿದ್ದಾರೆ. ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಜನತೆ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ.ಕೆಲವರು ಕಾಳಜಿ ಕೇಂದ್ರಕ್ಕೆ ತೆರಳದೆ ಮುಂಜಾಗ್ರತೆಯಿಂದ ಸ್ಥಳೀಯ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ವಿದ್ಯುತ್ ಪೂರೈಕೆ ಇಲ್ಲದರಿಂದ ಕೆಲವರ ಮೊಬೈಲ್ ಗಳಿಗು ಚಾರ್ಜ್ ಇಲ್ಲವಾಗಿತ್ತು. ಮನೆ ಸುತ್ತ ನೀರು ಆವರಿಸುವ ಭಯ ಒಂದೆಡೆಯಾದರೆ ಸಹಾಯಕ್ಕೆ ಇತರರನ್ನು ಕರೆಯಲು ಮೊಬೈಲ್ ಸಂಪರ್ಕ ಸಾಧ್ಯವಾಗದೇ ಸಂಕಷ್ಟದ ಸಮಯದಲ್ಲಿ ಜನ ಶಪಿಸುವಂತಾಯಿತು.
ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ತೊಡಕುಹೊನ್ನಾವರ: ತಾಲೂಕಿನ ಭಾಸ್ಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 69ರ ಪಕ್ಕದ ಗುಡ್ಡ ಕುಸಿತವಾಗಿ ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಕೆಲಕಾಲ ಸ್ಥಗಿತಗೊಂಡ ಘಟನೆ ಮಂಗಳವಾರ ನಡೆದಿದೆ.
ಕಳೆದ ವಾರ ಇದೇ ಸ್ಥಳದಲ್ಲಿ ಗುಡ್ಡ ಕುಸಿತ ಉಂಟಾಗಿ ಬಂಡೆಗಲ್ಲು ಉರುಳಿ ಬಿದ್ದಿತ್ತು. ಸೋಮವಾರ ತಡರಾತ್ರಿ ಎಡಬಿಡದೇ ಸುರಿದ ಮಳೆಗೆ ಬ್ರಹತ್ ಗಾತ್ರದ ಬಂಡೆಗಲ್ಲು ಬಿದ್ದು ವಾಹನ ಸಂಚಾರ ಸ್ಥಗಿತಗೊಳಿಸುವಂತಾಗಿತ್ತು.ತಾಲೂಕಾಡಳಿತ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. ರಸ್ತೆ ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟರು. ರಸ್ತೆಗೆ ಅಡ್ಡ ಬಿದ್ದಿರುವ ಕೆಲವು ಬಂಡೆಗಲ್ಲು ತೆರವುಗೊಳಿಸಿದ ತಕ್ಷಣ ಏಕಮುಖವಾಗಿ ರಸ್ತೆ ಸಂಚಾರ ಪ್ರಾರಂಭಿಸಲು ಅನುಕೂಲವಾಯಿತು.