ಸಮೀಕ್ಷೆಯವರಿಗೆ ಮಾಹಿತಿ ನೀಡದಂತೆ ಕೊಲೆ ಬೆದರಿಕೆ: ಸೈಯದ್ ಖಲೀಮುಲ್ಲಾ ಕುಟುಂಬ ಆರೋಪ

KannadaprabhaNewsNetwork |  
Published : Oct 19, 2025, 01:00 AM IST
೧೮ಕೆಎಂಎನ್‌ಡಿ-೭ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೈಯದ್ ಖಲೀಮುಲ್ಲಾ ಕುಟುಂಬದವರು ಹಲ್ಲೆ, ಕೊಲೆ ಬೆದರಿಕೆ ಬಗ್ಗೆ ವಿವರಣೆ ನೀಡಿದರು. | Kannada Prabha

ಸಾರಾಂಶ

ಹಲ್ಲೆ ನಡೆಸಿದ ಆರೋಪಿಗಳು ಜೋರಾಗಿ ಕೂಗಾಡುತ್ತಾ ಒಂದಲ್ಲಾ ಒಂದು ದಿನ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ನಡೆದ ಹಲ್ಲೆ ಮತ್ತು ಕೊಲೆ ಬೆದರಿಕೆ ಸಂಬಂಧ ಪೂರ್ವ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರಿಗೆ ದೂರು ನೀಡಿದ್ದರೂ ನಾಲ್ವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವವರಿಗೆ ಯಾವುದೇ ಮಾಹಿತಿ ನೀಡದಂತೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿರುವ ಘಟನೆ ಗುತ್ತಲು ಕಾಲೋನಿಯ ಸಾದತ್ ನಗರದಲ್ಲಿ ನಡೆದಿದೆ.

ಸೈಯದ್ ಖಲೀಮುಲ್ಲಾ ಹಲ್ಲೆಗೊಳಗಾದ ವ್ಯಕ್ತಿ. ಇವರ ಮೇಲೆ ಅದೇ ಬಡಾವಣೆಯ ಮುನಾವರ್ ಪಾಷ, ಆತನ ಶಿಷ್ಯರಾದ ಹಮೀದ್‌ಖಾನ್, ಸುಹೇಲ್ ಖಾನ್, ಶಾ ನಿಜಾಮ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸೈಯದ್ ಖಲೀಮುಲ್ಲಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅ.೧೭ರಂದು ಬೆಳಗ್ಗೆ ೧೦ ಗಂಟೆಗೆ ಸೈಯದ್ ಖಲೀಮುಲ್ಲಾ ಮನೆಗೆ ಗಣತಿದಾರರು ಬಂದಿದ್ದಾರೆ. ಆ ಸಮಯದಲ್ಲಿ ಗಣತಿದಾರರಿಗೆ ಮಾಹಿತಿ ನೀಡುವ ವೇಳೆ ಅಲ್ಲಿಗೆ ಬಂದ ಆರೋಪಿಗಳು ಸಮೀಕ್ಷೆಯವರಿಗೆ ಯಾವುದೇ ಮಾಹಿತಿ ನೀಡದಂತೆ ಧಮಕಿ ಹಾಕಿದರು. ಅವರ ಮಾತನ್ನು ಕೇಳದೆ ಗಣತಿದಾರರಿಗೆ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸೈಯದ್ ಖಲೀಮುಲ್ಲಾ ನೀಡಿದರು. ಮಾಹಿತಿ ನೀಡಿದ ಬಳಿಕ ಸಾದತ್‌ನಗರದ ಚಿಲ್ಲರೆ ಅಂಗಡಿಗೆ ಹೋಗುವಾಗ ಸನಾಖಾನ್ ಚೌಲ್ಟ್ರಿ ಮುಂಭಾಗದ ರಸ್ತೆಯಲ್ಲಿದ್ದ ಆರೋಪಿಗಳು ನನ್ನನ್ನು ಅಟ್ಟಾಡಿಸಿಕೊಂಡು ಬಂದು ಅವಾಚ್ಯಶಬ್ಧಗಳಿಂದ ನಿಂದಿಸಿ ನಾಲ್ಕೂ ಜನರು ಬೆನ್ನು, ಎದೆಯ ಭಾಗ, ತಲೆ, ಮೂಗು ಹಾಗೂ ದೇಹದ ಇತರೆಡೆಗಳಲ್ಲಿ ತೀವ್ರ ಹಲ್ಲೆ ಮಾಡಿದರು. ಈ ಸಮಯದಲ್ಲಿ ಅಲ್ಲೇ ಇದ್ದ ಕೆಲವರು ಹಲ್ಲೆಯಿಂದ ನನ್ನನ್ನು ರಕ್ಷಿಸಿದ್ದಾಗಿ ತಿಳಿಸಿದರು.

ಹಲ್ಲೆ ನಡೆಸಿದ ಆರೋಪಿಗಳು ಜೋರಾಗಿ ಕೂಗಾಡುತ್ತಾ ಒಂದಲ್ಲಾ ಒಂದು ದಿನ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ನಡೆದ ಹಲ್ಲೆ ಮತ್ತು ಕೊಲೆ ಬೆದರಿಕೆ ಸಂಬಂಧ ಪೂರ್ವ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರಿಗೆ ದೂರು ನೀಡಿದ್ದರೂ ನಾಲ್ವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಕೂಡಲೇ ಹಲ್ಲೆಕೋರರನ್ನು ಬಂಧಿಸಿ ನ್ಯಾಯ ದೊರಕಿಸಬೇಕು. ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಇದ್ದು ಸೂಕ್ತ ರೀತಿಯ ರಕ್ಷಣೆ ನೀಡುವಂತೆ ಮನವಿ ಮಾಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ