ಬಳ್ಳಾರಿ ವಿವಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ
ವಿಶ್ರಾಂತ ಕುಲಪತಿ ನೇತೃತ್ವದಲ್ಲಿ ಮತ್ತೊಂದು ತನಿಖೆಗೆ ನಿರ್ಧಾರ
ಕನ್ನಡಪ್ರಭವಾರ್ತೆ ಬಳ್ಳಾರಿಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಘಟಿಕೋತ್ಸವದ ನಕಲಿ ಪ್ರಮಾಣಪತ್ರ ವಿತರಿಸಿದ ಆರೋಪಿಗಳ ವಿರುದ್ಧ ಬಿಗಿ ಕಾನೂನು ಕ್ರಮ ಜರುಗಿಸಲು ಸಿಂಡಿಕೇಟ್ ಸಭೆ ನಿರ್ಧರಿಸಿದ್ದು, ಮತ್ತೊಂದು ಹಂತದ ಪ್ರಮಾಣಪತ್ರಗಳ ತನಿಖೆಯ ಬಳಿಕ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ. ಮುನಿರಾಜು, ನಕಲಿ ಪ್ರಮಾಣಪತ್ರ ಪ್ರಕರಣವನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತನಿಖಾ ಸಮಿತಿಯನ್ನು ರಚಿಸಿ, ಪ್ರಮಾಣಪತ್ರಗಳ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ವಿವಿ ಪೂರಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ವಿವಿಯಲ್ಲಿ ಮೇಲ್ನೋಟಕ್ಕೆ 2216 ನಕಲಿ ಪ್ರಮಾಣಪತ್ರಗಳ ವಿತರಣೆಯಾಗಿದೆ. ಈ ಸಂಬಂಧ ಸುಮಾರು ₹46.53 ಲಕ್ಷ ಅವ್ಯವಹಾರ ನಡೆದಿರುವುದು ಗೊತ್ತಾಗಿದೆ. ಇಬ್ಬರು ಹೊರಗುತ್ತಿಗೆ ನೌಕರರು ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಖಚಿತವಾಗಿದೆ. ಈವರಗೆ ವಿತರಿಸಿದ 25 ಸಾವಿರಕ್ಕೂ ಹೆಚ್ಚು ಪ್ರಮಾಣ ಪತ್ರಗಳ ಪೈಕಿ 20,900 ಅಧಿಕೃತ ಎಂದು ಗೊತ್ತಾಗಿದೆ. ಉಳಿದವು ಅನಧಿಕೃತವಾಗಿದೆ ಎಂದು ಗೊತ್ತಾಗಿದೆ. ಆದರೆ, 2216 ನಕಲಿ ಪ್ರಮಾಣಪತ್ರ ಬೆಳಕಿಗೆ ಬಂದಿರುವುದು ವಿವಿಯ ಆಂತರಿಕ ವರದಿಯಾಗಿದ್ದು, ವಿಶ್ರಾಂತ ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಬೇಕು. ಈ ಪ್ರಕರಣದಲ್ಲಿ ವಿವಿಯ ಇನ್ನು ಯಾರು ಯಾರು? ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಂತಾಗಬೇಕು. ಬಳಿಕ ಎಲ್ಲ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತಾಗಬೇಕು ಎಂದು ಸಿಂಡಿಕೇಟ್ ಸೂಚಿಸಿತು.