ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಟಿ.ಕೆಂಪಣ್ಣ ಆಯ್ಕೆ

KannadaprabhaNewsNetwork |  
Published : Mar 22, 2025, 02:00 AM IST
ಕನಸವಾಡಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಹೆಸರನ್ನು ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಘೋಷಿಸಿದರು. | Kannada Prabha

ಸಾರಾಂಶ

ನಿವೃತ್ತರಾದ ಮೇಲೆ ಹವ್ಯಾಸಿ ಛಾಯಾಗ್ರಾಹಕರಾಗಿ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪಿ ಹಾಗೂ ಶ್ರವಣಬೆಳಗೊಳ ಸೇರಿದಂತೆ ಹಲವು ಸ್ಮಾರಕಗಳ ಅತ್ಯಾಕರ್ಷಕ ಛಾಯಾಚಿತ್ರಗಳನ್ನು ತಮ್ಮ ಕ್ಯಾಮೆರಾ ಮೂಲಕ ಸೆರೆಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ ಬರುವ ಏ.12 ಮತ್ತು 13ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಜಿಲ್ಲಾ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ, ಖ್ಯಾತ ಛಾಯಾಚಿತ್ರ ಕಲಾವಿದ, ಸಾಕ್ಷ್ಯಚಿತ್ರ ನಿರ್ದೇಶಕ ಟಿ.ಕೆಂಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ತಿಳಿಸಿದರು.

ಅವರು ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಭೆಯಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಹೆಸರನ್ನು ಪ್ರಕಟಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಖ್ಯಾತ ಕಲಾವಿದ ಹಾಗೂ ಸಾಕ್ಷ್ಯಚಿತ್ರಗಳ ನಿರ್ದೇಶಕ ಮತ್ತು ಪ್ರವೃತ್ತಿಯಲ್ಲಿ ಛಾಯಾಗ್ರಹಣವನ್ನು ಒಲಿಸಿಕೊಂಡಿರುವ ಟಿ.ಕೆಂಪಣ್ಣ ದೊಡ್ಡಬಳ್ಳಾಪುರ ತಾಲೂಕು ಟಿ.ಚನ್ನಾದೇವಿ ಅಗ್ರಹಾರ ಗ್ರಾಮದವರು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕೋಶಾಧ್ಯಕ್ಷ ಡಾ.ಮುನಿರಾಜು, ಸಂಘಟನಾ ಕಾರ್ಯದರ್ಶಿಗಳಾದ ಶರಣಯ್ಯ ಹಿರೇಮಠ, ಚಂದ್ರಶೇಖರ್, ದೊಡ್ಡಬಳ್ಳಾಪುರ ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ನೆಲಮಂಗಲ ತಾಲೂಕು ಅಧ್ಯಕ್ಷ ಪ್ರಕಾಶಮೂರ್ತಿ, ಮಧುರೆ ಹೋಬಳಿ ಘಟಕದ ಅಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

ಬಹುಮುಖ ಪ್ರತಿಭೆಯ ಟಿ.ಕೆಂಪಣ್ಣ:

ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ''''ಛಾಯಾ ಮತ್ತು ಚಲನಚಿತ್ರ'''' ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಕೆಂಪಣ್ಣ ಅವರು ಸೇವೆ ಸಲ್ಲಿಸಿದ್ದಾರೆ. ಸರ್ಕಾರ ಜಾರಿಗೆ ತರುವ ಕಲ್ಯಾಣ ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದರೊಂದಿಗೆ ನಾಗರಿಕರಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸುವ ನಿಟ್ಟಿನಲ್ಲಿಯೂ ಅವರು ಶ್ರಮಿಸಿದ್ದಾರೆ. ಇವರು ಸ್ವತಃ ಚಿತ್ರಕಥೆ ಬರೆದು ನಿರ್ದೇಶಿಸಿದ ಸುಮಾರು 25 ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು ದೂರದರ್ಶನದಲ್ಲಿ ಪ್ರಸಾರವಾಗಿವೆ.

ನಿವೃತ್ತರಾದ ಮೇಲೆ ಹವ್ಯಾಸಿ ಛಾಯಾಗ್ರಾಹಕರಾಗಿ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪಿ ಹಾಗೂ ಶ್ರವಣಬೆಳಗೊಳ ಸೇರಿದಂತೆ ಹಲವು ಸ್ಮಾರಕಗಳ ಅತ್ಯಾಕರ್ಷಕ ಛಾಯಾಚಿತ್ರಗಳನ್ನು ತಮ್ಮ ಕ್ಯಾಮೆರಾ ಮೂಲಕ ಸೆರೆಹಿಡಿದಿದ್ದಾರೆ.

''''ಕಲ್ಲರಳಿ ಕಲೆಯಾಗಿ'''' ಹಾಗೂ ''''ಕರ್ನಾಟಕದ ಪ್ರಾಚೀನ ದೇವಾಲಯಗಳು'''' ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಅವರ 1,500 ಕ್ಕೂ ಹೆಚ್ಚು ಛಾಯಾಚಿತ್ರಗಳು ವಿಶ್ವಮಟ್ಟದ ಹಲವು ಸ್ಪರ್ಧೆಗಳಲ್ಲಿ ಮಾನ್ಯತೆ ಪಡೆದಿವೆ. ಇಂಗ್ಲೆಂಡ್‌ನ ರಾಯಲ್ ಫೋಟೊಗ್ರಫಿಕ್ ಸೊಸೈಟಿ, ಭಾರತದ ಫೆಲೊ ಆಫ್ ಫೆಡರೇಶನ್ ಆಫ್ ಇಂಡಿಯನ್ ಫೋಟೊಗ್ರಫಿ, ಫ್ರಾನ್ಸ್‌ನ ಫೆಡರೇಶನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್‌ ಫೋಟೊಗ್ರಫಿ, ಅಮೆರಿಕದ ಫೋಟೊಗ್ರಾಫಿಕ್ ಸೊಸೈಟಿ ಆಫ್ ಅಮೆರಿಕ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಪುರಸ್ಕರಿಸಿವೆ. ‘ಸ್ವಚ್ಛ ಭಾರತ್ ಅಭಿಯಾನ'''' ಯೋಜನೆಗೆ ಸಂಬಂಧಿಸಿದಂತೆ ಕೆಂಪಣ್ಣ ಅವರು ರೂಪಿಸಿದ ''''ಲಾವಣ್ಯ - ಎ ಡ್ರೀಮ್ ಕಮ್ ಟ್ರ್ಯೂ'''' ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಮಂಡ್ಯ ಜಿಲ್ಲೆ ಕಾಮೇಗೌಡರ ಮಳೆನೀರು ಸಂರಕ್ಷಣೆ ಪ್ರಯತ್ನದ ಕುರಿತು ನಿರ್ದೇಶಿಸಿರುವ ''''ಕಾಮೇಗೌಡ - ಎ ಯೂನಿಕ್ ರೋಲ್ ಮಾಡೆಲ್'''' ಇವರ ''''ಸೈನ್ಸ್ ಮಿರಾಕಲ್ಸ್'''' ಹಾಗೂ ''''ಗ್ರಾಮ ಸ್ವರಾಜ್ಯ'''' ಸಾಕ್ಷ್ಯಚಿತ್ರಕ್ಕೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''