ಕನ್ನಡಪ್ರಭ ವಾರ್ತೆ ಅರಸೀಕೆರೆ
ಪ್ರತಿದಿನ ಬೆಳಗಿನ ಜಾವ, ಮಳೆ- ಚಳಿ- ಬಿಸಿಲು ಲೆಕ್ಕಿಸದೆ, ಸುದ್ದಿ ತಲುಪಿಸುವ ನಿಸ್ವಾರ್ಥ ಸೇವೆಯ ಹಿಂದೆ ಇರುವವರು ಪತ್ರಿಕಾ ವಿತರಕರು. ಅವರ ಸೇವೆಗೆ ಗೌರವ ಸಲ್ಲಿಸುವ ದಿನವಿದು ಎಂದು ಅರಸೀಕೆರೆಯ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಹೇಳಿದರು.ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಪತ್ರಿಕಾ ವಿತರಕರಿಗೆ ಶ್ರೀಮಠದಲ್ಲಿ ಸನ್ಮಾನವಾಗಿ ಟೀ ಶರ್ಟ್‌ಗಳನ್ನು ವಿತರಿಸಿದ ಶ್ರೀಗಳು, ವಿತರಕರ ಸೇವೆಯನ್ನು ವಿಶಿಷ್ಟವಾಗಿ ಪ್ರಶಂಸಿಸಿದರು. ಪ್ರತಿಯೊಬ್ಬರೂ ನಿಷ್ಠೆಯಿಂದ ಮಾಡಿದ ಕೆಲಸವೇ ನಿಜವಾದ ಪೂಜೆ. ಯಾವುದೇ ಕೆಲಸ ಬಡತನವಲ್ಲ, ಪ್ರತಿಯೊಂದು ಸೇವೆಯೂ ಮಹತ್ವದ್ದೇ, ದಿನದ ಆರಂಭದಲ್ಲಿಯೇ ಸುದ್ದಿಯನ್ನು ಮನೆ ಮನೆಗೆ ತಲುಪಿಸುವ ವಿತರಕರನ್ನು ಸಮರ್ಥ ಧೂತರಂತೆ ವರ್ಣಿಸಿದರು. ಇವರೇ ಸಮಾಜದ ಜ್ಞಾನಪಕ್ಷಿಗಳು. ಇಂತಹವರು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಅವಕಾಶಗಳನ್ನು ಪಡೆಯಬೇಕೆಂಬುದು ನಮ್ಮ ಆಶಯ. ಇದರ ನಿಮಿತ್ತ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ನೆರವು ನೀಡಬೇಕು ಎಂದು ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಯಮಿ ರಾಘು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಪತ್ರಿಕಾ ವಿತರಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೇಶ- ವಿದೇಶದ ಸುದ್ದಿಯನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಈ ಸೇವೆ ಶ್ಲಾಘನೀಯ ಎಂದು ಹೇಳಿದರು. ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂನ ಉದಾಹರಣೆಯನ್ನು ಉಲ್ಲೇಖಿಸಿ, ಅವರು ಬಾಲ್ಯದಲ್ಲಿ ಪತ್ರಿಕೆ ಹಂಚುತ್ತಿದ್ದರೆಂದು ಗಮನಿಸಿ, ಇಂದಿನ ವಿತರಕರು ಕೂಡ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ತಿಳಿಸಿದರು.ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಪತ್ರಿಕಾ ವಿತರಕರ ಕೆಲಸವು ಬಹುಮಟ್ಟಿಗೆ ಮೌನ ಸೇವೆಯಾಗಿದೆ. ಜನರು ನಿದ್ರೆಯಿಂದ ಎಳುವ ಮುಂಚೆಯೇ ಅವರು ಸುದ್ದಿ ತಲುಪಿಸಿ ಹೋಗಿರುತ್ತಾರೆ. ಈ ಶ್ರಮದ ಹಿಂದೆ ಇರುವ ಶ್ರದ್ಧೆ, ಶಿಸ್ತು ಮತ್ತು ಸಮಯಪಾಲನೆಯು ಅವರ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ಗುಣಗಳು, ಶಿಕ್ಷಣದೊಂದಿಗೆ ಬೆರೆತು, ಅವರ ಭವಿಷ್ಯವನ್ನು ಬೆಳಗಿಸಬಲ್ಲವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆಯ ವತಿಯಿಂದ ನಾಗರಿಕರಿಗೆ ಉಚಿತವಾಗಿ ಪತ್ರಿಕೆಯನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಿ. ಪರಮೇಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸಿದ್ದೇಶ್, ಮಾಜಿ ಅಧ್ಯಕ್ಷ ರಾಮಚಂದ್ರು, ಆನಂದ್ ಟಿ., ಕಣಕಟ್ಟೆ ಕುಮಾರ್, ಕಾರ್ಯದರ್ಶಿಗಳಾದ ರಂಗನಾಥ್, ಮೋಹನ್, ನವೀನ್, ಶೇಖರ್ ಸಂಕೋಡನಹಳ್ಳಿ ಸೇರಿ ಅನೇಕ ಪತ್ರಕರ್ತರು ಮತ್ತು ವಿತರಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.