ಬಳ್ಳಾರಿ ಜಿಲ್ಲಾಸ್ಪತ್ರೆ, ಬಿಮ್ಸ್‌, ಕೇಂದ್ರ ಕಾರಾಗೃಹಕ್ಕೆ ಟಿ.ಶ್ಯಾಮ್ ಭಟ್ ಭೇಟಿ

KannadaprabhaNewsNetwork |  
Published : Jan 10, 2025, 12:50 AM IST
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಹಾಗೂ ನ್ಯಾಯಾಂಗ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಕಾರಾಗೃಹದ ಅಧೀಕ್ಷಕಿ ಲತಾ ಮತ್ತಿತರರಿದ್ದರು.  | Kannada Prabha

ಸಾರಾಂಶ

ಔಷಧಿ ವಿತರಣಾ ವಿಭಾಗಕ್ಕೆ ಭೇಟಿ ನೀಡಿ, ವಿವಿಧ ರೀತಿಯ ಎಲ್ಲ ಔಷಧಿಗಳು ಲಭ್ಯವಿದೆಯೇ?

ಬಳ್ಳಾರಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್, ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಿಗೋಡಿ ಗುರುವಾರ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆ, ಜಿಲ್ಲಾ ಕೇಂದ್ರ ಕಾರಾಗೃಹ, ಬಿಮ್ಸ್ ಆಸ್ಪತ್ರೆ, ಸರ್ಕಾರಿ ಬುದ್ಧಿಮಾಂದ್ಯ ಬಾಲಕರ ಬಾಲಮಂದಿರ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಜಿಲ್ಲಾಸ್ಪತ್ರೆ ಆವರಣದ 100 ಹಾಸಿಗೆಗಳ ತಾಯಿ ಮತ್ತು ನವಜಾತ ಶಿಶುಗಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಒಬಿಜಿ ವಾರ್ಡ್, ಪ್ರಸೂತಿ ವಿಭಾಗದ ಮುಂದೆ ಇದ್ದ ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಕ್ಷೇಮ ವಿಚಾರಿಸಿದರು. ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ? ಆರೋಗ್ಯ ಸೇವೆ ಒದಗಿಸುವಲ್ಲಿ ವಿಳಂಬ ತೋರುತ್ತಿದ್ದಾರೆಯೇ? ಎಂದು ವಿಚಾರಿಸಿದರು.

ಹೆರಿಗೆ ಕೋಣೆಗೆ ಭೇಟಿದ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಹೆರಿಗೆ ವಾರ್ಡ್ ಗಳಲ್ಲಿ ಸ್ವಚ್ಛತೆ ಆದ್ಯತೆ ನೀಡುವಂತೆ ಸೂಚಿಸಿದರು. ಬಳಿಕ ಔಷಧಿ ವಿತರಣಾ ವಿಭಾಗಕ್ಕೆ ಭೇಟಿ ನೀಡಿ, ವಿವಿಧ ರೀತಿಯ ಎಲ್ಲ ಔಷಧಿಗಳು ಲಭ್ಯವಿದೆಯೇ? ಅವಧಿ ಮೀರಿದ ಔಷಧಿಗಳನ್ನು ವಿತರಿಸುವಂತಿಲ್ಲ ಎಂದು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಕೇಂದ್ರ ಕಾರಾಗೃಹ:

ನಗರದ ಎಸ್.ಪಿ ಕಚೇರಿ ಹಿಂಭಾಗದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಜೈಲಿನಲ್ಲಿರುವ ವಿಚಾರಾಣಾಧೀನ ಕೈದಿಗಳ ಮೂಲಭೂತ ಹಕ್ಕುಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಕಾರಾಗೃಹದಲ್ಲಿನ ಊಟ ತಯಾರಿಕಾ ಸ್ಥಳ ಅಡುಗೆ ಕೋಣೆ ಸೇರಿದಂತೆ ಹಲವೆಡೆ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ವಿಚಾರಣಾಧೀನ ಕೈದಿಗಳಿಗೆ ನೀಡುವ ಉಪಹಾರ, ಊಟ, ಕುಡಿಯುವ ನೀರಿನ ಗುಣಮಟ್ಟದ ಕುರಿತು ಚರ್ಚಿಸಿದ ಅವರು, ವೇಳಾಪಟ್ಟಿಯಂತೆ ಆಹಾರ ವಿತರಣೆ ಮಾಡಲಾಗುತ್ತಿದೆಯೇ ಎಂದು ವಿಚಾರಿಸಿ ಮಾಹಿತಿ ಪಡೆದುಕೊಂಡರು.

ಜೈಲಿನ ಸುರಕ್ಷತೆ ಕುರಿತು ಮಾಹಿತಿ ಪಡೆದ ಅಧ್ಯಕ್ಷರು, ಜೈಲಿನಲ್ಲಿ ಸಿಸಿ ಕ್ಯಾಮೆರಾ ಸಂಖ್ಯೆ ಹೆಚ್ಚಿಸಲು ಸಲಹೆ ನೀಡಿದರು. ಅನಾರೋಗ್ಯಕ್ಕೆ ತುತ್ತಾಗುವ ಜೈಲುವಾಸಿಗಳು ಔಷಧಿಯನ್ನು ಸಿಬ್ಬಂದಿ ಸಮಕ್ಷಮವೇ ಸೇವಿಸಬೇಕು. ಔಷಧಿ ಸೇವಿಸದೆ, ಹಾಗೆಯೇ ಇರಿಸಿಕೊಂಡು, ಒಂದೇ ಬಾರಿ ಎಲ್ಲ ಔಷಧಿ ಸೇವಿಸಿದರೂ ಅವರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಕಾರಾಗೃಹದಲ್ಲಿ ಧ್ಯಾನ ಕಾರ್ಯಕ್ರಮವನ್ನು ನಿರಂತರ ಆಯೋಜಿಸಬೇಕು. ಜೈಲುವಾಸಿಗಳ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲು ಸಲಹೆ ನೀಡಿದರು.

ಜೈಲು ಅಧೀಕ್ಷಕಿ ಲತಾ ಉಪಸ್ಥಿತರಿದ್ದು, ಜೈಲಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜೈಲಿನಲ್ಲಿದ್ದ ವಿವಿಧ ಪ್ರಕರಣಗಳಲ್ಲಿ ಜೈಲುವಾಸಿಗಳಾಗಿರುವ ಕೈದಿಗಳನ್ನು ಭೇಟಿಯಾಗಿ, ಕೈದಿಗಳಿಗೆ ಕಾನೂನು ನೆರವು ದೊರೆಯುತ್ತಿರುವ ಬಗ್ಗೆ, ಊಟೋಪಹಾರದ ಬಗ್ಗೆ ಜೈಲಿನ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಪಡೆದ ಆಯೋಗದ ಅಧ್ಯಕ್ಷರು ಹಾಗೂ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಗೋಡಿ, ಜೈಲಿನಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಿಸುವುದು ಹಾಗೂ ಕಿಟಕಿಗಳಿಗೆ ಸೊಳ್ಳೆಗಳು ಜೈಲು ಕೋಣೆಗಳನ್ನು ಪ್ರವೇಶಿಸದಂತೆ ಪರದೆ ಹಾಕಿಸಲು ಸಲಹೆ ನೀಡಿದರು.

ಬಿಮ್ಸ್ ಆಸ್ಪತ್ರೆಗೆ ಭೇಟಿ:

ಬಳ್ಳಾರಿ ವೈದ್ಯಕೀಯ ಸಂಶೋಧನಾ ಮಹಾವಿದ್ಯಾಲಯ ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಅಧ್ಯಕ್ಷರು, ಹೊರರೋಗಿ ಮತ್ತು ಒಳರೋಗಿಗಳ ಬಳಿ ಸಂವಾದ ನಡೆಸಿದರು. ಆರೋಗ್ಯ ಸೇವೆ ನೀಡುವಲ್ಲಿ ಹಣದ ಆಮಿಷ ಒಡ್ಡುತ್ತಿದ್ದಾರೆಯೇ? ಎಂದು ವಿಚಾರಿಸಿದರು. ಬಳಿಕ ಬಿಮ್ಸ್‌ ನ ಹೆರಿಗೆ ಕೋಣೆ ಸೇರಿದಂತೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದರು. ಬಳಿಕ ನಗರದ ಕಂಟೋನ್ಮೆಂಟ್ ನ ಶಾಂತಿಧಾಮ ಆವರಣದ ಬುದ್ಧಿಮಾಂದ್ಯ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಭೇಟಿ ನೀಡಿದರು.

ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ:

ಬಳಿಕ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು, ಶಾಂತಿಧಾಮ ಆವರಣದ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತ ಪರಿಹಾರ ಕೇಂದ್ರದ ಪುರುಷರ ವಿಭಾಗ ಹಾಗೂ ಮಹಿಳಾ ವಿಭಾಗಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಎಡಿಸಿ ಮಹಮ್ಮದ್ ಝುಬೇರ್, ಡಿಎಚ್‌ಒ ಡಾ.ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ತಹಶೀಲ್ದಾರ ಗುರುರಾಜ ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ