12ಕ್ಕೆ ನಡೆವ ಹೌಸಿಂಗ್ ಕೋ ಆಪರೇಟಿವ್‌ಗೆ ಮತದಾನ । ಸೊಸೈಟಿಯಲ್ಲಿ 6,912 ಸದಸ್ಯರು
ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆಯು ಜ.12 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ಕ್ರಮ ಸಂಖ್ಯೆ 7 ರ ಬ್ಯಾಟ್ಸ್ ಮನ್ ಚಿಹ್ನೆಯ ಗುರುತಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿಯ ಮಾಜಿ ಸದಸ್ಯ ಹಾಗೂ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯ ಎಸ್.ತಂಗರಾಜ್ ಮನವಿ ಮಾಡಿದರು.
ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸುಮಾರು 100 ವರ್ಷ ಇತಿಹಾಸವುಳ್ಳ ಈ ಸೊಸೈಟಿಯಲ್ಲಿ 6,912 ಜನ ಸದಸ್ಯರಿದ್ದಾರೆ. 3,063 ಜನ ಮತದಾರರಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಸಕ್ತಿ ತೋರಿ ಬರುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಸ್ಪರ್ಧಿಗಳು ಹಣ,ಆಮಿಷಗಳನ್ನು ಒಡ್ಡುತ್ತಿದ್ದು, ಮತದಾರರು ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದರು.ನಾನು ಹಲವಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ಹೊಸ ಚಿಂತನೆ, ಹೊಸ ಆಲೋಚನೆಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ. ಸರ್ವಸದಸ್ಯರ ಧ್ವನಿಯಾಗಲು ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಒಟ್ಟು 32 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಬಾರಿ ಅತಿಹೆಚ್ಚು ಹೊಸಬರಿಗೆ, ಯುವಕರಿಗೆ ಆದ್ಯತೆ ನೀಡಬೇಕು. ಕಳೆದ ಅವಧಿಯಲ್ಲಿ ಆಡಳಿತದಲ್ಲಿದ್ದವರು ನಿವೇಶನ ಸೇರಿದಂತೆ ಸದಸ್ಯರಿಗೆ ಯಾವ ಅನುಕೂಲವನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.
ಚುನಾವಣೆಯು ಜ.12ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಬಾಲರಾಜ್ ರಸ್ತೆ ಕೋರ್ಟ್ ಮುಂಭಾಗದಲ್ಲಿರುವ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಶ್ರೀನಾಥ್, ಹರ್ಷ ಭೋವಿ, ಕೆ.ಈಶ್ವರ್, ಮಂಜುನಾಥ್, ಕುಮಾರ್, ದಿನೇಶ್, ಅಜಯ್, ಆದಿತ್ಯ, ಇತರರು ಹಾಜರಿದ್ದರು.