ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸ್ಕೌಟ್ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದವರು ಟಿ.ವಿ.ನಾರಾಯಣ ಶಾಸ್ತ್ರಿ. ಸಾಮಾಜಿಕ ಸೇವಾ ಕ್ಷೇತ್ರಕ್ಕೂ ಟಿ.ವಿ.ನಾರಾಯಣಶಾಸ್ತ್ರಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕದ ಪ್ರಧಾನ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ ಹೇಳಿದರು.ಟಿ.ವಿ.ನಾರಾಯಣಶಾಸ್ತ್ರಿ 99ನೇ ಜನ್ಮದಿನ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸ್ತ್ರಿ ನೇತೃತ್ವದಲ್ಲಿ 1987ರಲ್ಲಿ ನಡೆದ 19ನೇ ಕರ್ನಾಟಕ ರಾಜ್ಯ ಜಂಬೂರೇಟ್, ಪ್ರಥಮ ದಕ್ಷಿಣ ಭಾರತ ರಿಜಿನಲ್ ಜಂಬೂರೀ ಮತ್ತು ರಾಷ್ಟ್ರೀಯ ಭಾವೈಕ್ಯತ ಶಿಬಿರ ಅತ್ಯಂತ ಯಶಸ್ವಿಯಾಗಿತ್ತು ಎಂದು ತಿಳಿಸಿದರು.
ಟಿ.ವಿ.ನಾರಾಯಣಶಾಸ್ತ್ರಿ ಮಾರ್ಗದರ್ಶನದಲ್ಲಿ 21ನೇ ಕರ್ನಾಟಕ ರಾಜ್ಯ ಕಬ್ ಮತ್ತು ಬುಲ್ ಉತ್ಸವವನ್ನು ಆಯೋಜಿಸಿ ಎಲ್ಲಾ ಮಕ್ಕಳಿಗೂ ಜೋಗಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅವರ ಅವಧಿಯಲ್ಲಿ 10 ಮೂಲ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. 2008ರಲ್ಲಿ ಜಿಲ್ಲಾ ರ‍್ಯಾಲಿ ಹಮ್ಮಿಕೊಂಡು 2000 ಮಕ್ಕಳು ಭಾಗವಹಿಸಿದ್ದರು ಎಂದರು.ಶಾಸ್ತ್ರಿ ಅವರ ನಿಸ್ವಾರ್ಥ ಸೇವೆ ಪರಿಗಣಿಸಿ ರಾಷ್ಟ್ರೀಯ ಮುಖ್ಯಾಲಯ 2002ರಲ್ಲಿ ಸಂಸ್ಥೆಯ ಅತ್ಯುನ್ನತ ಪ್ರಶಸ್ತಿಯಾದ "ಬೆಳ್ಳಿ ಆನೆ " ಪ್ರಶಸ್ತಿ ನೀಡಿ ಗೌರವಿಸಿದೆ. ಸ್ಕೌಟ್ ಚಳವಳಿ ಮಾತ್ರವಲ್ಲದೇ ಕೈಗಾರಿಕಾ ಕ್ಷೇತ್ರದಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ಬಹಳಷ್ಟು ಜನರಿಗೆ ಸ್ವಂತ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೇರಕ ಶಕ್ತಿಯಾಗಿದ್ದರು ಎಂದು ಹೇಳಿದರು.
ಕೈಗಾರಿಕಾ ಸೇವೆಗಾಗಿ ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರಿಂದ ಪ್ರಶಸ್ತಿ ಪಡೆದರು. ಭಾರತ ಸರ್ಕಾರದ ಉದ್ಯೋಗ ರತ್ನ ಪ್ರಶಸ್ತಿ ಸಹ ಪಡೆದರು. ಸ್ಕೌಟ್ ಚಳವಳಿ, ಕೈಗಾರಿಕಾ ಕ್ಷೇತ್ರವಲ್ಲದೇ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಶಿವಮೊಗ್ಗ ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಶ್ರೀಯುತರು ಸೇವೆ ಸಲ್ಲಿಸಿದ್ದಾರೆ. ಸಿಟಿ ಕ್ಲಬ್ ಉಪಾಧ್ಯಕ್ಷ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ, ಗಾರೇಜ್ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದರು.
ಇ.ಪರಮೇಶ್ವರ್, ಶಕುಂತಲಾ ಚಂದ್ರಶೇಖರ್, ಜಿ.ವಿಜಯಕುಮಾರ್, ಭಾರತಿ ಡಯಾಸ್, ಶಿವಶಂಕರ್, ಗೀತಾ ಚಿಕಮಠ್, ರಾಘವೇಂದ್ರ, ದೇವಪ್ಪ, ಚಂದ್ರಶೇಖರ್, ವಿಜಯ್ ಉಪಸ್ಥಿತರಿದ್ದರು.- - - -1ಎಸ್‌ಎಂಜಿಕೆಪಿ01:
ಶಿವಮೊಗ್ಗದ ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಟಿ.ವಿ.ನಾರಾಯಣ ಶಾಸ್ತ್ರಿ 99ನೇ ಜನ್ಮದಿನ ಪ್ರಯುಕ್ತ ವಿಶೇಷ ಕಾರ್ಯಕ್ರಮ ನಡೆಯಿತು.