ಸಂಡೂರು: ಟ್ಯಾಬ್ ಸಂಡೂರು ಡಿಜಿಟಲ್ ಸ್ಟುಡಿಯೋ ಗುಣಾತ್ಮಕ ಹಾಗೂ ತಂತ್ರಜ್ಞಾನಾಧಾರಿತ ಶಿಕ್ಷಣ ಒದಗಿಸುವಲ್ಲಿ ಸಹಕಾರಿಯಾಗಿದೆ. ಇದೊಂದು ಮಾದರಿ ಯೋಜನೆಯಾಗಿದೆ ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಅಭಿಪ್ರಾಯಪಟ್ಟರು.
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಕಾಡುತ್ತಿತ್ತು. ಈ ಕೊರತೆಯನ್ನು ನೀಗಿಸಲು ತಾಲೂಕಿನಾದ್ಯಂತ ಏಕ ರೂಪದ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಂತಾಗಬೇಕು ಎಂಬ ಕನಸು ನನಸಾಗಿದೆ. ನುರಿತ ಶಿಕ್ಷಕರನ್ನು ಕರೆಸಿ ಡಿಜಿಟಲ್ ಸ್ಟುಡಿಯೋ ಮೂಲಕ ಅವರ ಬೋಧನೆಯನ್ನು ಇಲ್ಲಿರುವ ತಂತ್ರಜ್ಞಾನದ ಮೂಲಕ ಎಲ್ಲ ಶಾಲೆಗಳಿಗೆ ತಲುಪುವಂತೆ ಮಾಡಿ. ಶಿಕ್ಷಕರು ತಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಿದೆ. ರಾಜ್ಯದಲ್ಲಿಯೇ ಇದೊಂದು ಮಾದರಿ ಲ್ಯಾಬ್ ಆಗಿದೆ. ಈ ಲ್ಯಾಬ್‌ನ ಉಪಯೋಗ ಜಿಲ್ಲೆ, ರಾಜ್ಯಕ್ಕೂ ದೊರಕುವಂತಾಗಲಿ ಎಂದರು.
ತಾಲೂಕಿನ ಗ್ರಾಮವೊಂದರಲ್ಲಿ ಶಾಲಾ ಕೊಠಡಿಯನ್ನು ನಿರ್ಮಿಸಲಾಗಿದೆ. ಅದರ ಉದ್ಘಾಟನೆಗೂ ಮುಂಚೆಯೇ ಅದರ ಕಿಟಕಿ, ಬಾಗಿಲುಗಳಿಗೆ ಹಾನಿ ಮಾಡಲಾಗಿದೆ ಎಂಬುದನ್ನು ಉದಾಹರಿಸಿದ ಶಾಸಕರು, ಸಾರ್ವಜನಿಕ ಆಸ್ತಿಯನ್ನು ಜನರ ತೆರಿಗೆಯಿಂದ ನಿರ್ಮಾಣ ಮಾಡಲಾಗಿದೆ. ಅವುಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಕರು ಗುಣಾತ್ಮಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರು ಹಾಗೂ ದೇಶದ ಆಸ್ತಿಯನ್ನಾಗಿ ಮಾಡಬೇಕಿದೆ. ವಿದ್ಯಾರ್ಥಿಗಳೂ ತಂದೆ-ತಾಯಿಗಳ ಕನಸನ್ನು ನನಸಾಗಿಸುವ, ಅವರಿಗೆ ಗೌರವ ತರುವಂತಹ ಕೆಲಸಗಳನ್ನು ಮಾಡಬೇಕು. ತಂತ್ರಜ್ಞಾನದ ಜೊತೆಗೆ ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಕೊರೋನಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿದ್ದರು. ಮನೆಯಲ್ಲಿಯೇ ಅವರ ಶಿಕ್ಷಣ ಮುಂದುವರಿಯಬೇಕಿತ್ತು. ಆ ಸಂದರ್ಭದಲ್ಲಿ ನೂತನ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶದೊಂದಿಗೆ ಟ್ಯಾಬ್ ಸಂಡೂರು ಡಿಜಿಟಲ್ ಲ್ಯಾಬ್ ಕುರಿತು ಆಗಿನ ಶಾಸಕರು ಹಾಗೂ ಹಾಲಿ ಸಂಸದರಾಗಿರುವ ಈ. ತುಕಾರಾಮ್ ಅವರ ಬಳಿಯಲ್ಲಿ ಚರ್ಚಿಸಿದಾಗ, ಅವರು ಡಿಜಿಟಲ್ ಲ್ಯಾಬ್ ನಿರ್ಮಾಣ ಉತ್ತಮ ಯೋಜನೆಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದ್ದಲ್ಲದೆ, ಇಂದು ಅದು ಸಾಕಾರಗೊಳ್ಳುವಂತೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎನ್‌ಎಂಡಿಸಿ (ಸಿಎಸ್‌ಆರ್) ಜನರಲ್ ಮ್ಯಾನೇಜರ್ ಎಸ್. ಚಟರ್ಜಿ, ಎಚ್.ಆರ್. ಜನರಲ್ ಮ್ಯಾನೇಜರ್ ಜಿ. ವೇಲ್‌ವಸಂತನ್, ಡಿಜಿಎಂ ಎಸ್.ಕೆ. ಮಹಾಪಾತ್ರ, ಎಸ್.ಕೆ. ಪಾಂಡ್ಯ, ಸಂಗೀತಾ ಚಟರ್ಜಿ, ಸೀನಿಯರ್ ಮ್ಯಾನೇಜರ್ ಎಸ್. ಸತೀಶ್, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿದ್ದಣ್ಣ ಯಳವಾರ್, ಜಿಪಿಟಿ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಶಿಧರ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ರಂಗನಾಥ್ ದೇಸಾಯಿ, ಶಿಕ್ಷಕರು ಉಪಸ್ಥಿತರಿದ್ದರು.