ಸಮಸ್ಯೆ ಕೇಳಲು ಹೋದ ವೃದ್ಧನನ್ನು ಕೊಠಡಿಯಲ್ಲಿ ಕೂಡಿ ಹಾಕಿದ ತಹಸೀಲ್ದಾರ್..!

KannadaprabhaNewsNetwork |  
Published : Jul 31, 2026, 01:45 AM IST
30ಕೆಎಂಎನ್ ಡಿ16,17 | Kannada Prabha

ಸಾರಾಂಶ

ಪೌತಿ ಖಾತೆ ಕುರಿತು ಕಂದಾಯ ಇಲಾಖೆ ಕಚೇರಿಗೆ ವಿಚಾರಿಸಲು ಹೋದ ರೈತನನ್ನು ಸ್ವತಃ ಕೆ.ಆರ್.ಪೇಟೆ ತಹಸೀಲ್ದಾರ್ ಕಚೇರಿ ಕಾರಿಡಾರ್‌ನಿಂದ ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಸುಮಾರು ಒಂದು ಗಂಟೆಗಳ ಕಾಲ ಬಂಧಿಸಿದ ಘಟನೆ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌತಿ ಖಾತೆ ಕುರಿತು ಕಂದಾಯ ಇಲಾಖೆ ಕಚೇರಿಗೆ ವಿಚಾರಿಸಲು ಹೋದ ರೈತನನ್ನು ಸ್ವತಃ ತಹಸೀಲ್ದಾರ್ ಕಚೇರಿ ಕಾರಿಡಾರ್‌ನಿಂದ ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಸುಮಾರು ಒಂದು ಗಂಟೆಗಳ ಕಾಲ ಬಂಧಿಸಿದ ಘಟನೆ ವರದಿಯಾಗಿದೆ.

ತಹಸೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ರೈತನನ್ನು ಕಾರಿಡಾರ್‌ನಿಂದ ನೂಕಿಕೊಂಡು ಕೊಠಡಿಗೆ ತಳ್ಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಹಸೀಲ್ದಾರ್ ಶ್ರೇಯಸ್ ಮತ್ತು ಕಚೇರಿ ಸಿಬ್ಬಂದಿ ನಡೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ತಾಲೂಕಿನ ಮಲ್ಕೋನಹಳ್ಳಿಯ ಅಣ್ಣಯ್ಯ ಬಿನ್ ಸಿದ್ದೇಗೌಡ ವಯೋವೃದ್ಧ ರೈತ ತಮ್ಮ ಗ್ರಾಮದ ರೈತ ಮಹಿಳೆಯ ಪೌತಿ ಖಾತೆ ಸಂಬಂಧ ಆಗಿರುವ ಬೆಳವಣಿಗೆಗಳ ಬಗ್ಗೆ ವಿಚಾರಿಸಲು ತಾಲೂಕು ಕಚೇರಿಗೆ ಹೋಗಿದ್ದಾಗ ತಹಸೀಲ್ದಾರ್ ಶ್ರೇಯಸ್ ಪೌತಿ ಖಾತೆ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸುವ ಬದಲು ರೈತನನ್ನೇ ತರಾಟೆ ತೆಗೆದುಕೊಂಡಿದ್ದಾರೆ.

ನೀನು ಯಾರಿಗಾದರೂ ದೂರು ಕೊಡು ನನಗೆ ಉತ್ತರಿಸುವುದು ಗೊತ್ತಿಗೆ ಎಂದು ಹೇಳಿ ಸ್ಥಳದಲ್ಲಿದ್ದ ತಮ್ಮ ಅಧೀನ ಸಿಬ್ಬಂದಿ ಆರ್.ಆರ್.ಟಿ.ಈ ಶಿರಸ್ತೇದಾರ್ ಅಸ್ಲಂಭಾಷ ಮತ್ತು ವಿಶ್ವನಾಥ್ ಎನ್ನುವವರ ಜೊತೆಗೂಡಿ ರೈತನನ್ನು ಕಚೇರಿ ಕಾರಿಡಾರ್ ನಿಂದ ತಳ್ಳಿಕೊಂಡು ಶಿರಸ್ತೇದಾರ್ ಕೊಠಡಿಗೆ ಕೂಡಿ ಹಾಕಿದ್ದಲ್ಲದೆ ಪೊಲೀಸರನ್ನು ಕರೆಸುವ ಬೆದರಿಕೆ ಹಾಕಿರುವ ವೀಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಮಾತನಾಡಿದ ರೈತ ಅಣ್ಣಯ್ಯ, ಸ್ವಗ್ರಾಮ ಮಲ್ಕೋನಹಳ್ಳಿ ಸರ್ವೇ ನಂ 68/1,2,3ರಲ್ಲಿ 3.26 ಎಕರೆ ಇನಾಂ ಕೃಷಿ ಭೂಮಿ ಹನುಮಮ್ಮ ಅವರ ಹೆಸರಿಗೆ ಖಾತೆಯಾಗಿ ಅವರು ಅನುಭದಲ್ಲಿದ್ದರು. ಹನುಮಮ್ಮ ನಿಧನರಾದ ನಂತರ ಅವರ ಏಕೈಕ ಮಗಳಿಗೆ ಸದರಿ ಭೂಮಿ ಪೌತಿ ಖಾತೆಯಾಗಬೇಕಾಗಿತ್ತು. ಆದರೆ, ಕಂದಾಯ ಇಲಾಖೆ ಸಿಬ್ಬಂದಿ ಮೃತರ ಕುಟುಂಬಸ್ಥರ ವಾರಸುದಾರರ ಹೆಸರಿಗೆ ಪೌತಿಖಾತೆ ಮಾಡುವ ಬದಲು ಹಣ ಪಡೆದು ಬಲಾಢ್ಯರ ಹೆಸರಿಗೆ ಖಾತೆ ಮಾಡಿದ್ದಾರೆ ಎಂದು ದೂರಿದರು.

ಈ ಬಗ್ಗೆ ನಾನು ವಿಚಾರಿಸಲು ಹೋದಾಗ ನಿಖರ ಮಾಹಿತಿ ನೀಡುವ ಬದಲು ತಹಸೀಲ್ದಾರ್ ಶ್ರೇಯಸ್, ಶಿರಸ್ತೇದಾರ್ ಅಸ್ಲಂ ಭಾಷ ಮತ್ತು ಅವರ ಸಿಬ್ಬಂದಿ ನನಗೆ ಬೆದರಿಸಿ ನೂಕಿಕೊಂಡು ಹೋಗಿ ಕೊಠಡಿಯೊಂದರಲ್ಲಿ ಕೂಡಿಹಾಕಿ ಪೊಲೀಸರನ್ನು ಕರೆಸುವ ಬೆದರಿಕೆ ಹಾಕಿದರು.

ಈ ವಿಚಾರ ಹೊರಗಿನ ಜನರಿಗೆ ತಿಳಿಯುತ್ತಿದ್ದಂತೆಯೇ ಸುಮಾರು ಒಂದು ಗಂಟೆ ನಂತರ ನನ್ನನ್ನು ಬಿಟ್ಟು ಕಳುಹಿಸಿದ್ದಾರೆ. ರೈತರ ಸಮಸ್ಯೆ ಆಲಿಸಿ ಪರಿಹಾರ ಹುಡುಕಲು ಬರುವ ರೈತರನ್ನೆ ಬೆದರಿಸುವುದಾದರೆ ಸಮಸ್ಯೆಗಳನ್ನು ಪರಿಹರಿಸುವರ್‍ಯಾರು?. ರೈತರ ಮೇಲೆ ದಬ್ಬಾಳಿಕೆ ನಡೆಸಿದ ತಹಸೀಲ್ದಾರ್ ಶ್ರೇಯಸ್ ಮತ್ತು ಅವರ ಸಿಬ್ಬಂದಿಯನ್ನು ಸೇವೆಯಿಂದಲೇ ವಜಾಗೊಳಿಸಿ ಜನಸ್ನೇಹಿ ಆಡಳಿತ ನೀಡುವಂತೆ ಅಣ್ಣಯ್ಯ ಆಗ್ರಹಿಸಿದ್ದಾರೆ.

ರೈತನ ಮೇಲೆ ದಬ್ಬಾಳಿಕೆ ನಡೆಸಿ ಅಕ್ರಮವಾಗಿ ಬಂಧಿಸಿದ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನಡೆ ಖಂಡನೀಯ. ಇವರ ವಿರುದ್ಧ ಮೇಲಾಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಹಠಾವೋ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಡಿ.ಎಸ್.ವೇಣು ಮತ್ತು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಎಚ್ಚರಿಸಿದ್ದಾರೆ.

ತಾಲೂಕಿನ ಇತಿಹಾಸದಲ್ಲಿಯೇ ಯಾವುದೇ ತಹಸೀಲ್ದಾರ್ ಇಂತಹ ದುರ್ನಡತೆ ಪ್ರದರ್ಶಿಸಿಲ್ಲ. ಆದರೆ, ತಹಸೀಲ್ದಾರ್ ಶ್ರೇಯಸ್ ಅವರ ಸಿಬ್ಬಂದಿ ರೈತನ ವಿರುದ್ಧ ಗೂಂಡಾಗಳ ರೀತಿ ವರ್ತಿಸಿ ಬೆದರಿಕೆ ಹಾಕಿದ್ದಾರೆ. ನಮ್ಮ ತಾಲೂಕಿಗೆ ಗೂಂಡಾ ಅಧಿಕಾರಿಗಳ ಅಗತ್ಯವಿಲ್ಲ. ಸರ್ಕಾರದ ಸದರಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರೈತನ ಮೇಲೆ ರೌಡಿಸಂ ಮಾಡಿದ ತಹಸೀಲ್ದಾರ್ ಮತ್ತು ಇತರ ಸಿಬ್ಬಂದಿ ವಿರುದ್ಧ ತನಿಖೆಯಾಗಬೇಕು. ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮವಹಿಸಬೇಕು. ಇಲ್ಲದಿದ್ದರೆ ರಾಜ್ಯ ರೈತಸಂಘ ಜಿಲ್ಲಾ ಮಟ್ಟದಲ್ಲಿಯೇ ಹೋರಾಟಕ್ಕಿಳಿದೆ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಎಚ್ಚರಿಕೆ ನೀಡಿದ್ದಾರೆ.ರೈತನನ್ನು ಕೊಠಡಿಯಲ್ಲಿ ಕೂಡಿ ಹಾಕಿರುವ ಕಂದಾಯ ಇಲಾಖೆ ಅಧಿಕಾರಿಗಳ ನಡೆ ಖಂಡನೀಯ. ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಈ ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದು ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.

-ಎಚ್.ಟಿ.ಮಂಜು, ಶಾಸಕರು, ಕೆ.ಆರ್.ಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಬರಗಾಲ, ಸಿಎಂರಿಂದ ದೆಹಲಿ ಕ್ಯಾಂಪೇನ್: ಛಲವಾದಿ ನಾರಾಯಣಸ್ವಾಮಿ ಕಿಡಿ
ಅಧಿಕಾರಿಗಳ ಗೈರು ಹಾಜರಿ ಖಂಡಿಸಿ ಗ್ರಾಮಸಭೆ ಬಹಿಷ್ಕಾರ