ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Apr 24, 2025, 12:04 AM IST
ತುಮಕೂರಿನಲ್ಲಿ ಆಟೋ ಚಾಲಕರ, ಮಾಲೀಕರ ಸಂಘಟಗಳ ಒಕ್ಕೂಟದಿಂದ ಪ್ರತಿಭಟನೆ | Kannada Prabha

ಸಾರಾಂಶ

ಜಿಲ್ಲಾ ಆಟೋ ಚಾಲಕ, ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಆಟೋಚಾಲಕರು, ಮಾಲೀಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುನಗರದಲ್ಲಿ ಅನಧಿಕೃತವಾಗಿ ಚಲಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕು, ಹೊಸದಾಗಿ ಆಟೋ ಪರವಾನಗಿ ತಡೆಹಿಡಿಯಬೇಕು ಎಂದು ಒತ್ತಾಯಿಸಿ ಜಿಲ್ಲಾ ಆಟೋ ಚಾಲಕ, ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಆಟೋಚಾಲಕರು, ಮಾಲೀಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಮಹಾನಗರ ಪಾಲಿಕೆ ಆವರಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಆಟೋಚಾಲಕರು, ಮಾಲೀಕರು ಹೋರಾಟ ಆರಂಭಿಸಿದರು. ತಮ್ಮ ಆಟೋಗಳನ್ನು ನಗರಪಾಲಿಕೆ ಆವರಣದಲ್ಲಿ ನಿಲ್ಲಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ, ಅಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಆಟೋ ಚಾಲಕ, ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿ.ಪ್ರತಾಪ್ ಮದಕರಿ ಮಾತನಾಡಿ, ನಗರದಲ್ಲಿ ನಗರ ಸಾರಿಗೆ ಸೇವೆ ಆರಂಭವಾದಾಗಿನಿಂದ ಆಟೋಗಳ ವ್ಯವಹಾರ ಕುಸಿತಗೊಂಡು ಆಟೋಚಾಲಕರು ತಮ್ಮ ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರದಲ್ಲಿ ದಿನೇ ದಿನೇ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಮ್ಮಲ್ಲೇ ಬದುಕಿಗಾಗಿ ಪೈಪೋಟಿ ಶುರುವಾಗಿದೆ. ಈ ಪರಿಸ್ಥಿತಿಯಲ್ಲಿ ಹೊಸದಾಗಿ ಆಟೋ ಪರವಾನಗಿ ನೀಡಬಾರದು ಎಂದು ಮನವಿ ಮಾಡಿದರು. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ನಗರದ ಸುಮಾರು 150 ಕ್ಕೂ ಹೆಚ್ಚು ಆಟೋ ನಿಲ್ದಾಣಗಳನ್ನು ಕಿತ್ತುಹಾಕಿ ಆಟೋಗಳಿಗೆ ನೆಲೆ ಇಲ್ಲದಂತೆ ಮಾಡಲಾಗಿದೆ. ಈ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಬೇಕು. ಈ ಎಲ್ಲಾ ಸಮಸ್ಯೆಗಳ ಜೊತೆಗೆ ಇತ್ತೀಚೆಗೆ ನಗರದಲ್ಲಿ ಬೈಕ್ ಟ್ಯಾಕ್ಸಿಗಳು ಚಲಾವಣೆ ಆರಂಭವಾಗಿ ಆಟೋಚಾಲಕರ ವ್ಯವಹಾರ ಮತ್ತಷ್ಟು ಮಾರಕವಾಗಿವೆ. ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಇರುವುದರಿಂದ ಮಹಿಳಾ ಪ್ರಯಾಣಿಕರು ಆಟೋ ಹತ್ತುತ್ತಿಲ್ಲ, ಈ ಮೊದಲು ಶಾಲಾ ಮಕ್ಕಳನ್ನು ಆಟೋದವರು ಕರೆದೊಯ್ಯುತ್ತಿದ್ದರು, ಈಗ ಶಾಲೆಗಳೇ ಬಸ್ ವ್ಯವಸ್ಥೆ ಮಾಡಿರುವುದರಿಂದ ಅದಕ್ಕೂ ಕುತ್ತು ಬಂದಿದೆ. ಸಾಲಸೋಲ ಮಾಡಿಜೀವನ ನಿರ್ವಹಣೆಗೆ ಆಟೋ ಖರೀದಿಸಿದ ಚಾಲಕರು, ಮಾಲೀಕರು ಸಾಲ ತೀರಿಸಲಾಗದೆ, ಜೀವನ ನಿರ್ವಹಣೆ ಮಾಡಲಾಗದೆ ಪರಿತಪಿಸುತ್ತಿದ್ದಾರೆ ಎಂದು ಪ್ರತಾಪ್ ಮದಕರಿ ಹೇಳಿದರು.ಆಟೋಚಾಲಕರ ರಕ್ಷಣೆಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮಾಡಬೇಕಾಗಿದೆ. ಮಾನವೀಯ ದೃಷ್ಟಿಯಿಂದ ಆಟೋಚಾಲಕರಿಗೆ ಸರ್ಕಾರ ನೆರವಾಗಬೇಕು. ಅಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಆಟೋಚಾಲಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.ನಂತರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ತಮ್ಮಬೇಡಿಕೆ ಈಡೇರಿಸಿ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಕೋರಿದರು.ಈ ವೇಳೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಅವರು ಆಟೋ ಸಂಘಟನೆಯ ಪ್ರಮುಖರ ಸಭೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಅತಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈಡೇರಿಸದಿದ್ದರೆ ಆಟೋ ಸೇವೆ ಬಂದ್ ಮಾಡಿ ತೀವ್ರ ಹೋರಾಟ ಮಾಡುವುದಾಗಿ ಪ್ರತಾಪ್ ಮದಕರಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.ಆಟೋ ಸಂಘಟನೆಯ ಮುಖಂಡರಾದಕುಮಾರಸ್ವಾಮಿ, ಇಂತಿಯಾಜ್, ರಾಮಸ್ವಾಮಿಗೌಡ, ಹನುಮಂತಪುರ ಬಾಬು, ಗಡ್ಡ ಮಂಜು, ಉಪ್ಪಾರಹಳ್ಳಿ ಮಂಜುನಾಥ್, ನವೀನ್‌ಕುಮಾರ್, ಕೋರಾಕುಮಾರ್, ನಾಗರಾಜು, ಶಮೀಉಲ್ಲಾ, ರಮೇಶ್, ಫೈರೋಜ್, ತಿಪ್ಪೇಸ್ವಾಮಿ, ಜಾವಿದ್, ಗೋಪಾಲ್, ಜಗದೀಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ