ಕನ್ನಡಪ್ರಭ ವಾರ್ತೆ ಕಲಬುರಗಿಕಳಪೆ ಗುಣಮಟ್ಟದ ಹಾಲು ಶೇಖರಣೆ ಮಾಡಿ, ಸಂಸ್ಕರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಹೈಲಿನ ಡೈರಿಗಳ ವಿರುದ್ಧ ನಿಯಮಾನುಸಾರ ಖಡಕ್ ಕ್ರಮ ಕೈಗೊಳ್ಳಬೇಕು, ನಿಯಮಿತವಾಗಿ ಇಂತಹ ಡೈರಿಗಳ ತಪಾಸಣೆ ನಡೆಸಬೇಕು ಎಂದು ಕಲಬುರಗಿ, ಯಾದಗಿರಿ ಹಾಗೂ ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ್ ಒಳಗೊಂಡ ನಿಯೋಗ ಬೀದರ್ ಡಿ.ಸಿ. ಶಿಲ್ಪಾ ಶರ್ಮಾ ಅವರಿಗೆ ಮನವಿ ಮಾಡಿದೆ.ನಮ್ಮ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಸಂಗ್ರಹಿಸುವ, ಸಂಸ್ಕರಿಸುವ ಹಾಲು ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ, ಮಾನಕ ಕಾಯ್ದೆ ಪ್ರಕಾರ ಶೇ. 3.5 ಫ್ಯಾಟ್, ಶೇ.8.5 ಎಸ್‌ಎಎಫ್ ಹೊಂದಿರಲೇಬೇಕು. ಕಲಬೆರಕೆ ಮುಕ್ತವಾಗಿರಬೇಕು ಎಂಬ ಕಟ್ಟು ನಿಟ್ಟಿನ ಮಾನದಂಡವನ್ನೇ ನಾವೂ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಕಿಕೊಂಡು ಗುಣಮಟ್ಟದ ಹಾಲನ್ನು ಮಾತ್ರ ಶೇಖರಿಸಿ, ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿಯೋಗ ಹೇಳಿದೆ.ಆದರೆ ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಹಾಲಿನ ಡೈರಿಗಳು ಕೇಂದ್ರದ ಮಾನದಂಡದಂತೆ ನಿಗದಿತ ನಿಯಮ ಪಾಲಿಸದೆ ಕಮ್ಮಿ ಫ್ಯಾಟ್, ಎಸ್‌ಎನ್‌ಎಫ್ ಇರುವ ಹಾಲನ್ನೂ ಶೇಖರಿಸಿ, ಸಂಸ್ಕರಿಸಿರಿ ಖಾಸಗಿ ಡೈರಿಗಳು ಸಾರ್ವಜನಿಕರ ಬಳಕೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದಲೂ ತುಂಬಾ ಮಾರಕವಾದ ವಿಚಾರ ಎಂದು ಆರ್‌ಕೆ ಪಾಟೀಲ್ ನೇತತ್ವದ ನಿಯೋಗ ಡೀಸಿಗೆ ಮನವರಿಕೆ ಮಾಡಿದೆ.ಹೀಗಾಗಿ ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಕಾಯಿದೆಗಳು, ಮಾನದಂಡಗಳನ್ನೆಲ್ಲ ಆಧರಿಸಿ ಬೀದರ್ ಜಿಲ್ಲಾದ್ಯಂತ ಇರುವ ಡೈರಿಗಳ ಪೈಕಿ ಎಲ್ಲೆಲ್ಲಿ ಕಳಪೆ ಗುಣಮಟ್ಟದ ಹಾಲು ಶೇಖರಣೆ, ಸಂಸ್ಕರಣೆ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಅಗತ್ಯ ಕ್ರಮ ಜರುಗಿಸಬೇಕು. ನಿಗದಿತ ಗುಣಮಟ್ಟ, ಮಾನದಂಡಗಳ ಅಡಿಯಲ್ಲಿ ಹಾಲು ಶೇಖರಣೆ, ಸಂಸ್ಕರಣೆ ಕುರಿತು ಸಂಬಂಧಿತ ಡೈರಿಯವರಿಗೆ, ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಡೀಸಿ ಶಿಲ್ಪಾ ಶರ್ಮಾ ಅವರಿಗೆ ಆರ್‌ಕೆ ಪಾಟೀಲ್ ನೇತೃತ್ದ ನಿಯೋಗ ಮನವಿ ಮಾಡಿದೆ.ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ , ಭಿಮರಾವ ಬಳತೆ, ಬಂಡುರಾಜ ಕುಲಕರ್ಣಿ, ರೇವಣಸಿದ್ದಪ್ಪಾ ಪಾಟೀಲ್, ಸಂತೋಷ ಪಾಟೀಲ್, ನಾಗರಾಜ ಪಾಟೀಲ್, ಮಾರುತಿ ಕಾಶಂಪುರೆ , ವ್ಯವಸ್ಥಾಪಕ ನಿರ್ದೇಶಕರಾದ ವಿ.ರವಿಕಿರಣ ಈ ನಿಯೋಗದಲ್ಲಿದ್ದರು.