ಕನ್ನಡಪ್ರಭ ವಾರ್ತೆ ಮುಳಬಾಗಲು
ಪ್ರತಿವರ್ಷ ಟೊಮೆಟೋ ಋತುಮಾನ ಪ್ರಾರಂಭವಾದಾಗ ನೂರಾರು ಬಿತ್ತನೆ ಬೀಜ ವಿತರಿಸಲು ಜಿಲ್ಲಾದ್ಯಂತ ಜಾಹೀರಾತು ನೀಡುವ ಕೆಲ ನಕಲಿ ಔಷಧಿ ಕಂಪನಿಗಳ ಆರ್ಭಟ ನಿರಂತರ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ದುರಾದೃಷ್ಟಕರ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಟೊಮೆಟೋಗೆ ಬಾಧಿಸುತ್ತಿದ್ದ ಭೀಕರ ಎಲೆ ಮುದುರು ರೋಗದಿಂದ ತತ್ತರಿಸಿರುವ ರೈತರು, ಟೊಮೇಟೊ ಬೆಳೆ ಎಂದರೆ ಭಯಭೀತರಾಗಿದ್ದಾರೆ, ಈ ಬಾರಿ ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ ಮುಂಜಾಗ್ರತವಾಗಿ ಇಂತಹ ಕಂಪನಿಗಳ ನಿಯಂತ್ರಣ ಮಾಡದಿದ್ದರೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಟೊಮೆಟೋ ಬೆಳೆಯನ್ನೇ ನಿಷೇಧ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಕೃಷಿ ಇಲಾಖೆಗೆ ಕೂಗಳತೆ ದೂರದಲ್ಲಿರುವ ಸಾಯಿಲಕ್ಷ್ಮೀ ಟ್ರೇಡರ್ಸ್ಸ್ ಮಾಲೀಕರು ಸುಬಿಟೋ ಕಂಪನಿ ಹೆಸರಿನಲ್ಲಿ ೯೪ ಔಷಧಿಗಳನ್ನು ಜಿ೨, ಜಿ೩ ನಕಲಿ ಫಾರಂ ಹೆಸರಿನಲ್ಲಿ ರೈತರನ್ನು ವಂಚಿಸುತ್ತಿದ್ದರೂ ಕೃಷಿ ಅಧಿಕಾರಿಗಳು ಏಕೆ ಕ್ರಮಕೈಗೊಳ್ಳುತ್ತಿಲ್ಲ? ಇದರ ಜೊತೆಗೆ ಗಡಿಭಾಗದ ಔಷಧಿ ವ್ಯಾಪಾರಸ್ಥರು ಆಂಧ್ರದಲ್ಲಿ ನಕಲಿ ಔಷಧಿಗಳನ್ನು ದಾಸ್ತಾನು ಮಾಡಿ ರೈತರಿಗೆ ಅವಧಿ ಮುಗಿದ ಔಷಧಿಗಳನ್ನು ಮಾರಾಟ ಮಾಡುವುದೇಕೆ? ಎಂದು ಪ್ರಶ್ನೆ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.