ಭ್ರೂಣಪತ್ತೆ ನಡೆಸುವ ಸ್ಕ್ಯಾನಿಂಗ್‌ ಸೆಂಟರ್‌ಗಳ ವಿರುದ್ಧ ಕ್ರಮ ಜರುಗಿಸಿ

KannadaprabhaNewsNetwork |  
Published : Oct 09, 2026, 01:45 AM IST
ಕ್ಯಾಪ್ಷನ8ಕೆಡಿವಿಜಿ40 ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಪಿಸಿ ಅಂಡ್ ಪಿಎನ್ ಡಿಟಿ ಸಮಿತಿ ಪರಿಶೀಲನಾ ಸಭೆ ನಡೆಯಿತು. .......ಕ್ಯಾಪ್ಷನ8ಕೆಡಿವಿಜಿ41, 42 ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ವಿವಿಧ ಡಯಾಗ್ನಾಸ್ಟಿಕ್ ಸೆಂಟರ್, ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ದಾವಣಗೆರೆ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನಿಯಮಾನುಸಾರ ಅನಿರೀಕ್ಷಿತ ಭೇಟಿ ನೀಡುವುದು ಸೇರಿದಂತೆ ಭ್ರೂಣಹತ್ಯೆ ಮತ್ತು ಗರ್ಭಪಾತ ತಡೆಯಲು ಅಗತ್ಯವಿರುವ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪಿಸಿ ಅಂಡ್ ಪಿಎನ್ ಡಿಟಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.

- ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಸೂಚನೆ । ಭ್ರೂಣಹತ್ಯೆ-ಗರ್ಭಪಾತ ತಡೆಗೆ ತಾಕೀತು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ನಿಯಮಾನುಸಾರ ಅನಿರೀಕ್ಷಿತ ಭೇಟಿ ನೀಡುವುದು ಸೇರಿದಂತೆ ಭ್ರೂಣಹತ್ಯೆ ಮತ್ತು ಗರ್ಭಪಾತ ತಡೆಯಲು ಅಗತ್ಯವಿರುವ ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಪಿಸಿ ಅಂಡ್ ಪಿಎನ್ ಡಿಟಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದರು.

ಗುರುವಾರ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಿಸಿ ಅಂಡ್ ಪಿಎನ್ ಡಿಟಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಭ್ರೂಣಪತ್ತೆ ಹಚ್ಚುವ ಕೆಲಸ ತುಂಬಾ ಸ್ಮಾರ್ಟ್ ಆಗಿ ಮಾಡುತ್ತಿದ್ದಾರೆ. ಈ ಸಂಬಂಧ ದೂರುಗಳು ಬರುತ್ತಿವೆ. ಆದ್ದರಿಂದ ಅನುಮತಿ ಇಲ್ಲದೇ ಇರುವ ಸ್ಕ್ಯಾನ್ ಸೆಂಟರ್‌ಗಳನ್ನು ಪತ್ತೆ ಹಚ್ಚಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಿ ಅಂತಹ ಸೆಂಟರ್‌ಗಳ ವಿರುದ್ಧ ಕಾನೂನು ರೀತ್ಯಾ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಸ್ಕ್ಯಾನಿಂಗ್ ಸೆಂಟರ್‌ಗಳು ಮತ್ತು ಆಸ್ಪತ್ರೆಗಳು ಪರವಾನಗಿ ಅವಧಿ ಮುಗಿಯುವ ಕನಿಷ್ಠ 30 ದಿನಗಳ ಮುಂಚಿತವಾಗಿಯೇ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಒಂದುವೇಳೆ ನಿಯಮಿತ ಅವಧಿಯಲ್ಲಿ ನವೀಕರಣಗೊಳ್ಳದಿದ್ದಲ್ಲಿ, ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಕೇಂದ್ರಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಿದರು.

ಡಾ. ಎನ್.ಕೆ.ಕಾಳಪ್ಪ ಮಾತನಾಡಿ, ಜಿಲ್ಲೆಯಲ್ಲಿ ಲಿಂಗಾನುಪಾತ ಸಮಪ್ರಮಾಣದಲ್ಲಿದೆ. ಮೊದಲನೇ ಮತ್ತು ಎರಡನೇ ಮಗು ಹೆಣ್ಣು ಆಗಿದ್ದರೆ ಮೂರನೇ ಮಗುವು ಯಾವುದು ಎಂದು ಪತ್ತೆಹಚ್ಚಲು ಭ್ರೂಣಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಭೇಟಿ ಮಾಡುತ್ತಾರೆ, 3ನೇ ಮಗು ಹೆಣ್ಣು ಆಗಿದ್ದರೆ ಗರ್ಭಪಾತ ಮಾಡಿಸುತ್ತಾರೆ ಅಥವಾ ಮೊದಲನೇ ಮಗು ಗಂಡು ಆಗಿದ್ದರೆ ಎರಡನೇ ಮಗು ಯಾವುದು ಎಂದು ಪರಿಶೀಲನೆ ನಡೆಸುತ್ತಾರೆ. ಆದುದರಿಂದ ಮೂರನೇ ಅಥವಾ ಎರಡನೇ ಮಗುವಿನ ಜನನದ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಭೆಗೆ ತಿಳಿಸಿದರು.

ತಾಲೂಕು ವೈದ್ಯಾಧಿಕಾರಿಗಳು, ಎರಡನೇ ಅಥವಾ ಮೂರನೇ ಬಾರಿಗೆ ಗರ್ಭ ಧರಿಸಿರುವ ವಿವರಗಳನ್ನು ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಂದ ಪ್ರತಿ ಮಾಹೆ ಪಡೆದು ನಿಗಾ ವಹಿಸಬೇಕು. ತಾಲೂಕು ಮಟ್ಟದಲ್ಲಿ ಸ್ಕ್ಯಾನಿಂಗ್‌ ಸೆಂಟರ್‌ಗಳನ್ನು ಪರಿಶೀಲನೆ ಮಾಡಲು ಸಮಿತಿ ರಚಿಸಲು ಕ್ರಮವಹಿಸುವಂತೆ ತಿಳಿಸಿದರು.

ಬಾಲಿಕಾ ಸೌಫ್ಟ್ವೇರ್ ತಾಂತ್ರಿಕ ಸಮಸ್ಯೆಗಳು ಹಾಗೂ ಸ್ಕ್ಯಾನಿಂಗ್ ಯಂತ್ರಗಳ ಅಳವಡಿಕೆ/ ಬದಲಿ ಕುರಿತಾಗಿ ಸಲ್ಲಿಕೆ ಆಗಿರುವ ಮನವಿಗಳನ್ನು ಪರಿಶೀಲಿಸಿ, ಮಂಜೂರಾತಿ ನೀಡುವ ಸಂದರ್ಭದಲ್ಲಿಯೂ ಯಾವುದೇ ನಿಯಮಗಳ ಉಲ್ಲಂಘನೆ ಆಗದಂತೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಕಾಯ್ದೆ ಅನುಷ್ಠಾನದಲ್ಲಿ ಅನಧಿಕೃತವಾಗಿ ಗೈರುಹಾಜರಾಗಿ ಕಾರ್ಯಕ್ರಮ ಅನುಷ್ಠಾನಕ್ಕೆ ಕುಂಠಿತ ಉಂಟುಮಾಡಿರುವ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಹಾಗೂ ಈ ಕುರಿತು ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ವಿಭಾಗದಿಂದ ಸರ್ಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ನೋಂದಣಿ, ಸಾಫ್ಟ್ವೇರ್ ಬಳಕೆ ಹಾಗೂ ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಜಾಗೃತಿ ಮೂಡಿಸಲು ಅರ್ಧ ದಿನದ ವಿಶೇಷ ಕಾರ್ಯಾಗಾರ ಹಾಗೂ ಸಮಾವೇಶವನ್ನು ಆಯೋಜಿಸಲು ಸೂಚಿಸಿದರು.

ಸ್ಕ್ಯಾನಿಂಗ್ ಮತ್ತಿತರ ಪ್ರಸವಪೂರ್ವ ರೋಗನಿರ್ಣಯ ವಿಧಾನಗಳನ್ನು ಕೇವಲ ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು. ಗರ್ಭದಲ್ಲಿ ಇರುವುದು ಹೆಣ್ಣುಮಗು ಎಂದು ತಿಳಿದು ಮಾಡುವ ಗರ್ಭಪಾತಗಳನ್ನು ತಡೆಯಬೇಕು. ಸ್ಕ್ಯಾನ್ ಸೆಂಟರ್‌ಗಳಲ್ಲಿ ಗರ್ಭಿಣಿಗೆ ಅಥವಾ ಆಕೆಯ ಸಂಬಂಧಿಕರಿಗೆ ಯಾವುದೇ ಸಜ್ಞೆ, ಮಾತು ಅಥವಾ ಲಿಖಿತ ರೂಪದಲ್ಲಿ ಮಗುವಿನ ಲಿಂಗವನ್ನು ತಿಳಿಸುವುದು ಕಾನೂನುಬಾಹಿರವಾಗಿದೆ. ಸ್ಕ್ಯಾನಿಂಗ್ ಸೆಂಟರ್‌ಗಳು, ಜೆನೆಟಿಕ್ ಲ್ಯಾಬೊರೇಟರಿಗಳು ಮತ್ತು ಕ್ಲಿನಿಕ್‌ಗಳು ಸರ್ಕಾರದ ಸೂಕ್ತ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಪ್ರತಿಯೊಂದು ಸ್ಕ್ಯಾನಿಂಗ್ ಪ್ರಕ್ರಿಯೆಯ ವಿವರಗಳನ್ನು ಮತ್ತು ಗರ್ಭಿಣಿಯ ಲಿಖಿತ ಒಪ್ಪಿಗೆ ಕಡ್ಡಾಯವಾಗಿ ದಾಖಲಿಸಿ ಇಡಬೇಕು. ತಪ್ಪಿದಲ್ಲಿ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ತಪ್ಪು ಮಾಡಿದ ವೈದ್ಯರ ವೈದ್ಯಕೀಯ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ದಿಢೀರ್ ಭೇಟಿ:

ದಾವಣಗೆರೆ ನಗರದ ಹೆಗಡೆ ಡಯಾಗ್ನಾಸ್ಟಿಕ್ ಸೆಂಟರ್, ಶಿವಶಂಕರ ಮೆಮೋರಿಯಲ್ ಹಾಸ್ಪಿಟಲ್ ಸೌಖ್ಯಾದ ಹಾಸ್ಪಿಟಲ್‌ಗಳಿಗೆ ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ತಂಡ ಭೇಟಿ ನೀಡಿ ಸ್ಕ್ಯಾನಿಂಗ್ ಮೆಷಿನ್‌ಗಳನ್ನು ಕೊಠಡಿ, ಸ್ಕ್ಯಾನ್ ಮಾಡಲು ನೀಡಿರುವ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಧು, ಡಾ.ಕಾಳಪ್ಪ, ಡಾ.ಸುಂದರೇಶ್, ಡಾ.ಮಂಜುನಾಥ ಪಾಟೀಲ್ ಹಾಗೂ ಡಾ.ಸುಮಿತ್ರ ಇದ್ದರು.

- - -

-8ಕೆಡಿವಿಜಿ40: ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಪಿಸಿ ಅಂಡ್ ಪಿಎನ್ ಡಿಟಿ ಸಮಿತಿ ಪರಿಶೀಲನಾ ಸಭೆ ನಡೆಯಿತು.

-8ಕೆಡಿವಿಜಿ41, 42: ದಾವಣಗೆರೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ವಿವಿಧ ಡಯಾಗ್ನಾಸ್ಟಿಕ್ ಸೆಂಟರ್, ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲ-ಜಲ ರಕ್ಷಣೆ, ಒತ್ತುವರಿ ತೆರವು, ಪಹಣಿ ಇಂಡೀಕರಣ ತ್ವರಿತಗೊಳಿಸಿ
ಲಿಂ.ಜಯದೇವ ಶ್ರೀಗಳ ಸ್ಮರಣೋತ್ಸವ, ರಥೋತ್ಸವಕ್ಕೆ ಚಾಲನೆ