ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಜನಿವಾರ ತೆಗಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿರುವ ಕ್ರಮ ಖಂಡಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ತಾಲೂಕು ಜನಿವಾರ ಧಾರಣೆಗಳ ಒಕ್ಕೂಟದವರು ಪ್ರತಿಭಟನೆ ನಡೆಸಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗಿ, ಉಪವಿಭಾಗಾಧಿಕಾರಿ ಕಾರ್ಯಾಲಯಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಮುರಗೋಡ ಕೇಂಗೇರಿ ಮಠದ ದಿವಾಕರ ದಿಕ್ಷೀತ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದಲ್ಲಿ ಈಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿ ಧಾರ್ಮಿಕ ದೌರ್ಜನ್ಯ ನಡೆಸಿರುವುದು ಅಕ್ಷಮ ಅಪರಾಧವಾಗಿದೆ. ಕಲಬುರ್ಗಿಯಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದು ಸನಾತನ ಜನಿವಾರ ಸಮುದಾಯಕ್ಕೆ ಮನಸ್ಸಿಗೆ ತುಂಬಾ ಘಾಸಿಯಾಗಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಇಂಥ ಧಾರ್ಮಿಕ ತೇಜೋವಧೆ ಘಟನೆಗಳು ಜರುಗಿರುವುದಿಲ್ಲ. ಇತ್ತಿಚಿನ ದಿನಮಾನಗಳಲ್ಲಿ ಸನಾತನ ಹಿಂದೂ ಧರ್ಮಗಳ ಮೇಲೆ ಪದೇ ಪದೇ ಅವಹೇಳನಕಾರಿ ಘಟನೆಗಳು ಜರಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಇಲ್ಲದ ಕಾನೂನು ಕರ್ನಾಟಕದಲ್ಲಿ ಮಾತ್ರ ಏಕೆ? ಈ ಕೃತ್ಯದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇದಕ್ಕೆ ರಾಜಕೀಯ ಪ್ರೇರಿತವೇ ಮೂಲಕಾರಣವಾಗಿದೆ. ಇದನ್ನು ಕೂಡಲೇ ಪತ್ತೆ ಮಾಡಿ ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷಿಗೆ ಗುರಿಪಡಿಸಬೇಂದು ಆಗ್ರಹಿಸುತ್ತೇವೆ ಎಂದರು.ಈ ವೇಳೆ ತಾಲೂಕು ಜನಿವಾರ ಧಾರಣೆಗಳ ಒಕ್ಕೂಟದ ಮುಖಂಡರಾದ ರಾಜು ಬಡಿಗೇರ, ಮುಕ್ಕುಂದ ಕುಲಕರ್ಣಿ, ವಿಜಯ ಪತ್ತಾರ, ಡಾ.ರೋಹಿಣಿ ನೇಗಿನಹಾಳ, ರಾಜು ಬೋಂಗಾಳೆ ಮಾತನಾಡಿ, ಪ್ರತಿಯೊಬ್ಬ ಹಿಂದೂ ಜನಿವಾರವನ್ನು ಧರಿಸಬಹುದು ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರ ಧರಿಸಿದ ಮೇಲೆ ಅದರ ನಿಯಮ ಪಾಲಿಸಬೇಕು. ಅಂದಾಗ ಅದರ ಉದ್ಧೇಶ ಸಫಲವಾಗುತ್ತದೆ. ಈಚೆಗೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಜನಿವಾರ ತೆಗಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿರುವ ಕ್ರಮ ತ್ರೀವ ಖಂಡನೀಯವಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ತಪ್ಪಿಸ್ಥತರ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರಲ್ಲದೆ, ಇಂತಹ ಕೃತ್ಯಗಳು ಇದೇ ರೀತಿ ಮುಂದುವರಿದರೆ ರಾಜ್ಯಾದ್ಯಂತ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಉಪವಿಭಾಗಾಧಿಕಾರಿ ಅನೂಪ ಸ್ಥಿತಿಯಲ್ಲಿ ತಹಸೀಲ್ದಾರ್ ಹಣಮಂತ ಶಿರಹಟ್ಟಿ ಮನವಿ ಸ್ವಿಕರಿಸಿ, ತಮ್ಮ ಮನವಿಯನ್ನು ಸರ್ಕಾರದ ಮೂಲಕ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಪ್ರಲ್ಹಾದ ದೇವರಹುಬ್ಬಳ್ಳಿ, ಬಸವರಾಜ ಬಡಿಗೇರ, ಡಾ.ಸಾಗರ ಕುಲಕುರ್ಣಿ, ಅಣ್ಣಪ್ಪ ಜೊಂಜಾಳೆ, ಅರುಣ ಹನಮಶೇಟ, ಬಸವರಾಜ ದೋತ್ರದ ಅನೂಪ ಇಂಚಲ, ಕೆ.ಎಸ್ ಕುಲಕರ್ಣಿ, ಡಿ.ಆರ್.ಜೋಶಿ, ಮೋಹನ ಪತ್ತಾರ, ಉದಯ ಕೊಳೇಕರ, ರಮೇಶ ಪಾರಿಶ್ವಾಡ, ಮನೋಹರ ಬೋಗಾಳೆ, ಬಸವರಾಜ ಯಾಸನ್ನವರ, ಮಹಿಳಾ ಸಂಘದ ಪದಾಧಿಕಾರಿಗಳು, ವಿಶ್ವಕರ್ಮ, ಬ್ರಾಹ್ಮಣ, ಕ್ಷತ್ರಿಯ, ನಾಮದೇವ ಶಿಂಪಿ, ಮರಾಟ, ಜೈನ, ಗೊಂದಳಿ, ವೈಶ್ಯವಾಣಿ, ಸೂರ್ಯವಂಶಿ, ರಜಪೂತ ಸಮಾಜ ಸೇರಿದಂತೆ ಇತರರಿದ್ದರು.