ಕೊಪ್ಪಳ:
ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ಹಾಗೂ ಕತ್ತರಿಸಲು ಸೂಚಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಬ್ರಾಹ್ಮಣ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಗುರುರಾಜ ಎನ್. ಜೋಶಿ, ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಆರಂಭವಾಗಿದ್ದು ಏ. 17ರಂದು ತೀರ್ಥಹಳ್ಳಿ, ಧಾರವಾಡ, ಬೆಂಗಳೂರು ಹಾಗೂ ಬೀದರನಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ ಸೂಚಿಸಲಾಗಿದೆ. ಇದು ಬ್ರಾಹ್ಮಣ ಜನಾಂಗದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೃತ್ಯವಾಗಿದೆ ಎಂದು ಕಿಡಿಕಾರಿದರು.
ಉನ್ನತ ಶಿಕ್ಷಣ ಇಲಾಖೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸೂಚನೆ ಅಥವಾ ಸುತ್ತೋಲೆ ಹೊರಡಿಸಿದೆಯೇ, ಸಿಇಟಿ ಪರೀಕ್ಷೆಗೂ ಬ್ರಾಹ್ಮಣ ಸಮಾಜದ ಜನಿವಾರಕ್ಕೂ ಸಂಬಂಧವಿದೆಯೇ ಎಂಬುದನ್ನು ಸಚಿವರು ಸ್ಪಷ್ಟಿಕರಣ ನೀಡಬೇಕೆಂದು ಒತ್ತಾಯಿಸಿದರು.ಜಿಲ್ಲಾ ಸಂಚಾಲಕ ಎಚ್.ಬಿ. ದೇಶಪಾಂಡೆ ಮಾತನಾಡಿ, ಈ ಘಟನೆಗೆ ಕಾರಣವಾದ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಸಮಾಜದ ಕ್ಷಮೆ ಕೇಳಬೇಕು. ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ನೀಡಬಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಜಿಲ್ಲಾಧಿಕಾರಿ ಮೂಲಕ ಉನ್ನತ ಶಿಕ್ಷಣ ಸಚಿವ ಡಾ. ಎಂ.ಪಿ। ಸುಧಾಕರಗೆ ಮನವಿ ಸಲ್ಲಿಸಿದರು. ಈ ವೇಳೆ ಬ್ರಾಹ್ಮಣ ಸಮುದಾಯದ ಪಂ. ರಘು ಪ್ರೇಮಾಚಾರ, ವಸಂತ ಪೂಜಾರ, ಜಗನ್ನಾಥ ಹುನಗುಂದ, ಪೋತೇದಾರ್, ಸುರೇಶ ಗಾವರಾಳ, ರಾಜೇಂದ್ರ ಬಿಸರಳ್ಳಿ, ರಾಘವೇಂದ್ರ ನರಗುಂದ, ವೇಣುಗೋಪಾಲ ಜಹಗೀರದಾರ್, ಡಿ.ವಿ. ಜೋಶಿ, ಅರವಿಂದಕುಮಾರ, ಪ್ರಾಣೇಶ ಮಾದಿನೂರು, ಅನಿಲ್ ಕುಲಕರ್ಣಿ, ಸುಶೀಲೇಂದ್ರ ದೇಶಪಾಂಡೆ, ರಮೇಶ ಹುನಗುಂದ, ರಮೇಶ ಜಹಗೀರದಾರ, ರಾಮಮೂರ್ತಿಸಿದ್ದಂತಿ, ಬಿ.ವಿ. ಜೋಶಿ, ಲತಾ ಮುಧೋಳ, ಸುಷ್ಮಾ ಜಹಗೀರದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.